ನಿಗೂಢ ಕಾಡಿನ ಲೋಕದಲ್ಲಿ ನಡೆಯುವ ದೈವದ ಪವಾಡ. ಮನುಷ್ಯರು ಮತ್ತು ಕಾಡಿನ ನಡುವಿನ ಹೋರಾಟ. ಭೂತಕೋಲ. ಪಂಜುರ್ಲಿ ಹಾಗೂ ಗುಳಿಗ ದೈವದ ಆಟ.. ಎಲ್ಲವನ್ನೂ ಹೊತ್ತು ನಗುನಗಿಸುತ್ತಲೇ ಬೇರೊಂದು ಲೋಕಕ್ಕೇ ಕರೆದೊಯ್ಯುವ ಕಾಂತಾರ ಈಗ ತಮಿಳುನಾಡು ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದೆ. ಹಿಂದಿಯಲ್ಲಿ ನಭೂತೋನಭವಿಷ್ಯತಿ ಎಂಬಂತೆ ಅದ್ಧೂರಿಯಾಗಿ ತೆರೆ ಕಂಡಿದೆ. ಈಗ ಮಲಯಾಳಂನಲ್ಲಿ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು ಮುಂದಿನ ವಾರ ಅಕ್ಟೋಬರ್ 20ಕ್ಕೆ ರಿಲೀಸ್.
ಹಾಗೆ ನೋಡಿದರೆ ಕೇರಳ ಮತ್ತು ಕರಾವಳಿಯ ಸಂಪರ್ಕಗಳು ಹಾಗೂ ಸಂಸ್ಕೃತಿ ಒಂದೇ ತೆರನಾದದ್ದು. ಮಲಯಾಳಿಗೆ ಇದು ತುಂಬಾ ಹತ್ತಿರವಾಗುವ ನಿರೀಕ್ಷೆಯೂ ಇದೆ. ಪೃಥ್ವಿರಾಜ್ ಸುಕುಮಾರನ್ ಚಿತ್ರವನ್ನು ಕೇರಳದಲ್ಲಿ ಕಾಂತಾರವನ್ನು ರಿಲೀಸ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ಕಿಶೋರ್, ಅಚ್ಯುತ್, ಮಾನಸಿ ಸುಧೀರ್ ಮೊದಲಾದವರ ನಟನೆಗೆ ಮನಸೋತಿರುವ ಪ್ರೇಕ್ಷಕರು ಕಡೆಯ ಕ್ಲೈಮಾಕ್ಸ್ನಲ್ಲಂತೂ ಬೇರೆಯದೇ ಲೋಕಕ್ಕೆ ಹೋಗುತ್ತಾರೆ. ಧನುಷ್, ಪ್ರಭಾಸ್, ನಾನಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.