ಸ್ಯಾಂಡಲ್ವುಡ್ನಲ್ಲಿ ಈಗ ಎಲ್ಲಿ ನೋಡಿದರೂ ಕಾಂತಾರದ್ದೇ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಚಿತ್ರ ಕಾಂತಾರ. ಈ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿಯಲ್ಲೂ ಕಾಂತಾರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2,500ಕ್ಕೂ ಅಧಿಕ ಸ್ಕೀನ್ಗಳಲ್ಲಿ ಕಾಂತಾರ ಪ್ರದರ್ಶನವಾಗಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆ.ಜಿ.ಎಫ್ 2 ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿತ್ತು. ಆ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಹೊಂಬಾಳೆ ಆ ಹಿಡಿತದ ಮೂಲಕವೇ ಕಾಂತಾರವನ್ನು 2500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದೆ. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ ವಿಜಯ್ ಕಿರಗಂದೂರು.
ಕಾಂತಾರ ಕನ್ನಡದಲ್ಲಿ ದಾಖಲೆ ಬರೆದಿದ್ದರೂ ಸಂಭ್ರಮಿಸುವಷ್ಟು ಪುರುಸೊತ್ತು ರಿಷಬ್ ಶೆಟ್ಟಿಯವರಿಗೆ ಇಲ್ಲ. ನಿರ್ದೇಶಕರೂ ಅವರೇ ಆದ್ದರಿಂದ ಚಿತ್ರದ ಔಟ್ ಕಮ್ ನೋಡಿಕೊಳ್ಳಬೇಕು. ಹೀರೋ ಅವರೇ ಆದ್ದರಿಂದ ಚಿತ್ರದ ಪ್ರತಿ ಪ್ರೆಸ್ ಮೀಟ್, ಈವೆಂಟ್‍ಗಳಲ್ಲೂ ಪ್ರಚಾರದ ನೇತೃತ್ವ ವಹಿಸಬೇಕು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿರುವ ರಿಷಬ್ ಶೆಟ್ಟಿ & ಟೀಂ ಸಂಭ್ರಮದ ಹೊಳೆಯಲ್ಲಿ ತೇಲುತ್ತಿದೆ.