ಅಕ್ಟೋಬರ್ 29. ಕನ್ನಡಿಗರನ್ನು ಅಪ್ಪು ಅಗಲಿದ ದಿನ. ಅಭಿಮಾನಿಗಳು ಈಗಲೂ ಇದು ನಿಜವೋ.. ಸುಳ್ಳೋ.. ಎಂಬ ಗೊಂದಲದಲ್ಲಿರುವಾಗಲೇ.. ಒಂದು ವರ್ಷವಾಗುತ್ತಾ ಬಂದಿದೆ. ಅಪ್ಪು ಸಮಾಧಿ ಪುಣ್ಯಕ್ಷೇತ್ರವಾಗಿ ಹೋಗಿದೆ. ದಿನ ದಿನವೂ ಸಾವಿರಾರು ಅಭಿಮಾನಿಗಳು ಬಂದು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇದರ ಜೊತೆಯಲ್ಲೇ ಅಕ್ಟೋಬರ್ ತಿಂಗಳ ಕೊನೆಯ ವಾರ ಅಪ್ಪು ವಾರವಾಗುತ್ತಿದೆ.
ಅಕ್ಟೋಬರ್ 28ಕ್ಕೆ ವಿಶ್ವದಾದ್ಯಂತ ಗಂಧದ ಗುಡಿ ಟ್ರೇಲರ್ ಬಿಡುಗಡೆಯಾಗುತ್ತಿದೆ. ಆ ದಿನವನ್ನು ಹಬ್ಬ ಮಾಡಲು ಅಭಿಮಾನಿಗಳು ನಿರ್ಧರಿಸಿಬಿಟ್ಟಿದ್ದಾರೆ.
ಅಕ್ಟೋಬರ್ 26ರಂದು ಅಪ್ಪು ಸಮಾಧಿ ಬಳಿ 75 ಕಟೌಟ್ ನಿಲ್ಲಿಸಲಾಗುತ್ತಿದೆ. 27ನೇ ತಾರೀಕು ಸ್ಮಾರಕದ ಸುತ್ತಮುತ್ತ ಒಂದು ಕಿ.ಮೀ. ಅಂತರದಲ್ಲಿ ದಸರಾ ರೀತಿ ದೀಪಾಲಂಕಾರ ಮಾಡಲಾಗುತ್ತಿದೆ. 28ರಂದು ಗಂಧದ ಗುಡಿ ಬಿಡುಗಡೆ ದಿನ ಕೆಜಿ ರಸ್ತೆ ಹಾಗೂ ಮಾಗಡಿ ರಸ್ತೆಗಳಲ್ಲಿ ಸಂಭ್ರಮಾಚರಣೆ. 29ರಂದು ಪುಣ್ಯತಿಥಿ. ಆ ದಿನ ಅಪ್ಪು ಸ್ಮಾರಕದ ಎದುರು ಅನ್ನದಾಸೋಹವಿದೆ.
ಅಕ್ಟೋಬರ್ 21ರಂದು ಗಂಧದ ಗುಡಿ ಪ್ರಿ-ರಿಲೀಸ್ ಈವೆಂಟ್ ಇದೆ. ರಾಜ್ ಕುಟುಂಬ, ಮುಖ್ಯಮಂತ್ರಿ ಬೊಮ್ಮಾಯಿ, ರಜನಿಕಾಂತ್ ಸೇರಿದಂತೆ ಸಮಸ್ತ ಚಿತ್ರರಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ.
ಅದಾದ ನಂತರ ನವೆಂಬರ್ 1ರಂದು ಕರ್ನಾಟಕ ರತ್ನ ಗೌರವ ಪ್ರದಾನ. ರಾಜ್ಯೋತ್ಸವದ ದಿನ ಕನ್ನಡಿಗರ ರಾಜಕುಮಾರನಿಗೆ ಕರ್ನಾಟಕದ ಅತಿ ದೊಡ್ಡ ಪುರಸ್ಕಾರ.