ಕನ್ನಡ ಸಿನಿಮಾ ರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಬಿಂಚಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ .ಸಿ.ಎನ್ ಅಶ್ವತ್ಥನಾರಾಯಣ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅನಂತ್ ನಾಗ್ ನನಗೆ ಪ್ರಶಸ್ತಿಗಳ ಬಗ್ಗೆ ಆಸೆಯಿಲ್ಲ. ನನ್ನ ಮಗಳು ಮತ್ತು ಹೆಂಡತಿ ಒತ್ತಾಯ ಮಾಡಿದರು. ಹೀಗಾಗಿ ಈ ಪದವಿಯನ್ನು ಒಪ್ಪಿಕೊಂಡೆ. ಇಂಥದ್ದೊಂದು ಗೌರವ ಸಿಗುವುದಕ್ಕೆ ಕಾರಣ ಕನ್ನಡ ಸಿನಿಮಾ ರಂಗ. ಇಂತಹ ರಂಗವನ್ನು ಬೆಳೆಸಿದವರು ಡಾ.ರಾಜ್ ಕುಮಾರ್ ಎಂದು ನೆನಪಿಸಿಕೊಂಡರು.
8ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದವನು. ಆನಂತರ ಮುಂಬೈಗೆ ಹೋಗಿ ಆಂಗ್ಲ ಮಾಧ್ಯಮ ಸೇರಿಕೊಂಡೆ. ಇಂಗ್ಲಿಷ್ ಕಾರಣಕ್ಕಾಗಿ ಓದಿನಲ್ಲಿ ಹಿಂದೆ ಬಿದ್ದೆ. ಹೊನ್ನಾವರದಲ್ಲಿ ಓದುವಾಗ ನನ್ನದು ಕನ್ನಡ ಮಾಧ್ಯಮವಾಗಿತ್ತು ಎಂದು ನೆನಪಿಸಿಕೊಂಡರು. ಮುಂಬೈ ದಿನಗಳಲ್ಲಿ ತಾವು ಕಂಡಂತಹ ಸಿನಿಮಾ ರಂಗ ಹಾಗೂ ಒಡನಾಡಿದ ದಿಗ್ಗಜರ ಬಗ್ಗೆಯೂ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ನಿರಂಜನ ವಹಿಸಿದ್ದರು.