` ಅದೊಂದು ತಪ್ಪು ಮಾಡಬೇಡಿ : ಕಾಂತಾರ ನೋಡಿದವರಿಗೆ ರಿಷಭ್ ಶೆಟ್ಟಿ ಮನವಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅದೊಂದು ತಪ್ಪು ಮಾಡಬೇಡಿ : ಕಾಂತಾರ ನೋಡಿದವರಿಗೆ ರಿಷಭ್ ಶೆಟ್ಟಿ ಮನವಿ
Kantara Movie Image

ಕಾಂತಾರ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆದ ಬೆನ್ನಲ್ಲೇ ಕೆಲವರು ಕೊಂಕನ್ನೂ ತೆಗೆದಿದ್ದಾರೆ. ಆದರೆ ಸಿನಿಮಾ ನೋಡಿದ ಚಿತ್ರರಸಿಕರ ಪಾಲಿಗೆ ಕಾಂತಾರ ಸಿನಿಮಾ ಹಬ್ಬ. ಮಾಸ್ಟರ್ ಪೀಸ್. ಪ್ರೇಕ್ಷಕರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ. ಸಿದ್ಧಾಂತಗಳಿಗಿಂತ ಸಿನಿಮಾ ಕೊಡುವ ಮನರಂಜನೆ ಮುಖ್ಯ ಎನ್ನುವವರು ಅವರು. ಸರಿ ತಪ್ಪುಗಳನ್ನು ಬೇರೆಯವರಿಗಿಂತ ಹೆಚ್ಚಾಗಿ ತಮಗೆ ತಾನೇ ನಿರ್ಧರಿಸುವವರು. ಅವರಿಗೆಲ್ಲ ಸಿನಿಮಾ ಖುಷಿ ಕೊಟ್ಟಿದೆ. ಆದರೆ ಈ ಖುಷಿಯ ಜೊತೆಯಲ್ಲೇ ಅತ್ಯುತ್ಸಾಹದಲ್ಲಿ ಮಾಡುತ್ತಿರುವ ಒಂದು ತಪ್ಪನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ಎತ್ತಿ ತೋರಿಸಿದ್ದಾರೆ. ಆ ರೀತಿ ಮಾಡದಂತೆ ಮನವಿ ಮಾಡಿದ್ದಾರೆ.

ಸಿನಿಮಾದಲ್ಲಿ ನನ್ನ ಪಾತ್ರ ದೈವಾವೇಶದಲ್ಲಿ ಬೊಬ್ಬೆಯಿಡುವ ದೃಶ್ಯವಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ಅದು ದೈವಾರಾಧನೆಯ  ಒಂದು ಭಾಗ, ನಂಬಿಕೆಯ ವಿಷಯ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು. ದಯವಿಟ್ಟು ಯಾರೂ ದೈವದಂತೆ ಕೂಗು ಹಾಕೋದನ್ನು ಯಾರೂ ಅನುಕರಣೆ ಮಾಡಬಾರದು ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ.

ಸಾಮಾನ್ಯವಾಗಿ ದೇವರು ಕುರಿತಾದ ಪಾತ್ರಗಳನ್ನು ಮಾಡುವವರು ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಮಾಂಸ ಸೇವನೆ, ಧೂಮಪಾನ, ಮದ್ಯಪಾನಗಳನ್ನೆಲ್ಲ ಬಿಟ್ಟು ಬದುಕುತ್ತಾರೆ. ಅದೇ ರೀತಿ ರಿಷಬ್ ಶೆಟ್ಟಿಯವರು ಕೂಡಾ ಈ ಪಾತ್ರ ಮಾಡುವಾಗ ತಾವು ಅನುಸರಿಸಿದ ಸಂಪ್ರದಾಯ, ನಂಬಿಕೆ, ಆಚರಣೆಗಳ ಬಗ್ಗೆ ಹೇಳಿದ್ದಾರೆ. ಆ ರೀತಿ ಇಲ್ಲದೆ ಹೋದರೆ ಅಪಚಾರವಾಗುತ್ತದೆ. ಕೆಡುಕಾಗುತ್ತದೆ ಎನ್ನುವುದು ನಂಬಿಕೆ. ಸ್ವತಃ ಕರಾವಳಿ ಕಡೆಯವರಾದ ರಿಷಬ್ ಶೆಟ್ಟಿಯವರಿಗೆ ಆ ನಂಬಿಕೆಯೂ ಇದೆ. ಹೀಗಾಗಿಯೇ ಉತ್ಸಾಹದಲ್ಲಿ ದೈವದಂತೆ ಕೂಗು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಕಿಶೋರ್ ಪ್ರಮುಖ ಪಾತ್ರದಲ್ಲಿರುವ ಕಾಂತಾರ ಗೆಲುವಿನ ದಶಮಿ ಆಚರಿಸುತ್ತಿದೆ. ಹೊಂಬಾಳೆ ಫಿಲಮ್ಸ್ ಮತ್ತೊಮ್ಮೆ ಜಯಭೇರಿ ಮೊಳಗಿಸಿದೆ.