ಗುರು ಶಿಷ್ಯರು ರಿಲೀಸ್ ಆದ ಒಂದೇ ವಾರಕ್ಕೆ ರಿಲೀಸ್ ಆಗಿದ್ದು ಕಾಂತಾರ. ಕ್ರಿಕೆಟ್ ಭಾಷೆಯಲ್ಲಿ ಹೇಳೋದಾದರೆ ಕಾಂತಾರದ ಓಟ ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗಿನಂತಿದೆ. ಗುರು ಶಿಷ್ಯರ ಓಟ ವಿರಾಟ್ ಕೊಹ್ಲಿ ಬ್ಯಾಟಿಂಗಿನಂತೆ. ಸ್ಟಡಿ ಗೋ. ಆದರೆ ಗುರು ಶಿಷ್ಯರ ಗೆಲುವು ಸೃಷ್ಟಿಸಿದ ಹೊಸ ಹೆಜ್ಜೆಯಲ್ಲಿ ಕಥೆಗಳ ಹುಡುಕಾಟ ಶುರುವಾಗಿರೋದು ವಿಶೇಷ.
ಜಡೇಶ್ ಕುಮಾರ್ ಹಂಪಿ ಖೋಖೋ ಎಂಬ ಹಳ್ಳಿ ಆಟವನ್ನು ಗುರು ಶಿಷ್ಯರು ಚಿತ್ರದಲ್ಲಿ ಎಲ್ಲ ಕಾಮಿಡಿ, ಮನರಂಜನೆ, ಪ್ರೀತಿಯೊಂದಿಗೆ ಬೆರೆಸಿ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸಿದ್ದರು. ಶರಣ್-ನಿಶ್ವಿಕಾ, 12 ಹುಡುಗರ ಅದ್ಭುತ ಆಟ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗಲೂ ಚಿತ್ರಮಂದಿರಗಳಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿದೆ. ಅತ್ತ ಕಾಂತಾರ ಕೂಡಾ ಕರಾವಳಿ ಕಡೆಯ ಅಪ್ಪಟ ನಂಬಿಕೆ ಆಚರಣೆಗಳ ಕುರಿತು ಬೆಳಕು ಚೆಲ್ಲಿರುವ ಚಿತ್ರ.
ಈ ಎರಡೂ ಚಿತ್ರಗಳ ಗೆಲುವು ಕನ್ನಡ ಚಿತ್ರರಂಗದವರನ್ನು ಹೊಸ ಹುಡುಕಾಟಕ್ಕೆ ಪ್ರೇರೇಪಿಸಿವೆ. ಎರಡೂ ಕೂಡಾ ದೇಸಿ ಕಥೆಗಳದ್ದು. ಇಲ್ಲಿನ ಮಣ್ಣಿನ ಕಥೆಗಳು. ಇವುಗಳಿಗೆ ಸ್ಥಳೀಯ ಜನಪದಗಳನ್ನು ಕೂಡಾ ಹೊಂದಿಸಿ ಜೋಡಿಸಲಾಗಿದೆ. ಇದು ಹೊಸ ಕ್ರಾಂತಿಗೆ ನಂದಿ ಹಾಡಿದ್ದು ಇಂತಹ ಹಳ್ಳಿ ಸೊಗಡಿನ ಕಥೆಗಳ ಹುಡುಕಾಟ ಈಗ ಶುರುವಾಗಿದೆ. ಬರಲಿ.. ಅಂತಹ ಎಲ್ಲ ಕಥೆಗಳೂ ಸಿನಿಮಾಗಳಾಗಿ ಕನ್ನಡದ ಸಂಸೃತಿ ವಿಜೃಂಭಿಸಲಿ.