ಗುರು ಶಿಷ್ಯರು ಚಿತ್ರ ಇಷ್ಟವಾಗೋಕೆ ಹಲವು ಕಾರಣಗಳಿವೆ. ಚೆಂದದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ.. ಶರಣ್, ನಿಶ್ವಿಕಾ ಹಾಗೂ 12 ಹುಡುಗರ ಗತ್ತು ಗೈರತ್ತಿನ ಅಭಿನಯ.. ಇವೆಲ್ಲವನ್ನೂ ಮೀರಿ ಇಷ್ಟವಾಗಿದ್ದು ಖೋಖೋ ಆಟದ ಹಿನ್ನೆಲೆಯ ಕಥೆ ಇರುವ ಕಾರಣಕ್ಕೆ. ಚಿತ್ರವನ್ನು ಪ್ರೇಕ್ಷಕರು ಕೈಚಾಚಿ ಮನದುಂಬಿ ಅಪ್ಪಿಕೊಂಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಇಂಥಾದ್ದೊಂದು ಚಿತ್ರ ಕನ್ನಡದಲ್ಲಿ ಬರಬೇಕಿತ್ತು. ಇನ್ನು ಮುಂದೆಯೂ ಇಂತಹ ಚಿತ್ರಗಳು ಬರಲಿ ಎಂದು ಹಾರೈಸುತ್ತಿದ್ದಾರೆ.
ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ಶರಣ್, ನಿಶ್ವಿಕಾ ನಾಯ್ಡು, ತರುಣ್ ಸುಧೀರ್ ಎಲ್ಲರೂ ಮೆಚ್ಚುಗೆಯ ಸುರಿಮಳೆಯಲ್ಲಿ ಮಿಂದೇಳುತ್ತಿದ್ದಾರೆ. ಚಿತ್ರ ಬಿಡುಗಡೆ ದಿನವೇ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಿಗೆ ತೋರಿಸುವುದಾಗಿ ಶರಣ್ ಹೇಳಿಕೊಂಡಿದ್ದರು. ಇದೀಗ ಶರಣ್ ಖುದ್ದು ಮುಖ್ಯಮಂತ್ರಿಗಳನ್ನು ಭೇಟಿ ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ.
ಸಿನಿಮಾ ಬಗ್ಗೆ ಕೇಳಿದ್ದೇನೆ. ಖೋಖೋ ಆಟವನ್ನು ಹೈಲೈಟ್ ಮಾಡಿ ತೋರಿಸಿದ್ದೀರಂತೆ. ಖಂಡಿತಾ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡುತ್ತೇನೆ. ಇಂತಹ ಇನ್ನಷ್ಟು ಚಿತ್ರಗಳು ಬರಲಿ ಎಂದಿದ್ದಾರೆ ಬಸವರಾಜ ಬೊಮ್ಮಾಯಿ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನಮ್ಮ ಚಿತ್ರತಂಡದ ಭೇಟಿಗೆ ಸಮಯ ನೀಡಿದ ಮುಖ್ಯಮಂತ್ರಿಗಳಿಗೆ ನಟ ಶರಣ್, ತರುಣ್ ಸುಧೀರ್, ಜಡೇಶ್ ಕುಮಾರ್ ಹಂಪಿ ಹಾಗೂ ಗುರು ಶಿಷ್ಯರು ಚಿತ್ರತಂಡ ಧನ್ಯವಾದ ಅರ್ಪಿಸಿದೆ.