ಕಾಂತಾರ ರಿಲೀಸ್ ಆಗುವುದು ನಾಳೆಗೆ. ಸೆ.30ರಂದು ರಿಲೀಸ್ ಆಗಬೇಕಿದ್ದ ಕಾಂತಾರ ಚಿತ್ರದ ಪ್ರೀಮಿಯರ್ ಶೋ ಇವತ್ತೇ ಶುರುವಾಗುತ್ತಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಮೊದಲ ಚಿತ್ರ ಕಾಂತಾರ. ಹೊಂಬಾಳೆಯವರ ಜೊತೆ ಮೊದಲ ಸಿನಿಮಾ. ಚಿತ್ರ ಪ್ಯಾನ್ ಇಂಡಿಯಾ ಮೂವಿ ಅಲ್ಲ. ಆದರೆ ಇಂಗ್ಲಿಷ್ ಸಬ್ ಟೈಟಲ್ಲಿನಲ್ಲಿ ಬಿಡುಗಡೆಯಾಗುತ್ತಿದೆ.
ಚಿತ್ರದ ಪ್ರೀಮಿಯರ್ ಶೋಗಳಿಗೆ ವ್ಯವಸ್ಥೆ ಮಾಡಲಾಗಿದ್ದು ಒಟ್ಟು 95 ಕೇಂದ್ರಗಳಲ್ಲಿ ಪ್ರೀಮಿಯರ್ ಶೋ ನಡೆಯಲಿವೆ. ಕರ್ನಾಟಕದಲ್ಲಿ 50 ಕಡೆ, ಹೈದರಾಬಾದ್, ಚೆನ್ನೈ, ಕೊಚ್ಚಿ, ಮುಂಬೈ, ಪೂನಾ, ದೆಹಲಿ, ಪಟ್ನಾ ಸೇರಿದಂತೆ ದಕ್ಷಿಣ ಭಾರತದಲ್ಲಿ 25 ಹಾಗೂ ಉತ್ತರ ಭಾರತದಲ್ಲಿ 20 ಕಡೆ ಪ್ರೀಮಿಯರ್ ಶೋಗಳಿವೆ.
ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಆಗಿ ಸಪ್ತಮಿ ಗೌಡ ನಟಿಸಿದ್ದಾರೆ. ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಘಟಾನುಘಟಿಗಳಿದ್ದಾರೆ. ಪ್ರೀಮಿಯರ್ ಶೋ ಹೊರತುಪಡಿಸಿ ದೇಶ ವಿದೇಶಗಳಲ್ಲೂ ಸೆ.30ರಂದೇ ರಿಲೀಸ್ ಆಗುತ್ತಿದೆ ಕಾಂತಾರ. ಎಲ್ಲೆಡೆ ಭರ್ಜರಿ ಬುಕಿಂಗ್ ಆಗಿದೆ.
ನಮ್ಮ ಹೊಂಬಾಳೆ ಸಂಸ್ಥೆ ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ. ರಿಷಬ್ ಇಲ್ಲಿ ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಒಂದೊಳ್ಳೆಯ ಸಂದೇಶ ಕೊಟ್ಟಿದ್ದಾರೆ. ನಮ್ಮ ಇತರೆ ಚಿತ್ರಗಳಂತೆ ಕಾಂತಾರ ಕೂಡಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ವಿಜಯ್ ಕಿರಗಂದೂರು .