ಜಯತೀರ್ಥ ಚಿತ್ರ ಎಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರಗಳ ಹೆಸರುಗಳಿಂದಲೇ ಬನಾರಸ್ ಮೇಲೆ ನಿರೀಕ್ಷೆಯಿತ್ತು. ನಿರೀಕ್ಷೆ ಹುಸಿ ಮಾಡದಂತೆ ವಿಭಿನ್ನ ಕಥೆಯೊಂದಿಗೇ ಟ್ರೇಲರ್ ಹೊರಬಿಟ್ಟಿದ್ದಾರೆ ಜಯತೀರ್ಥ. ಬನಾರಸ್ ಚಿತ್ರದ ಟ್ರೇಲರ್ ನೋಡಿದವರಿಗೆ ಇದು ಬರಿಯ ಹೊಸ ಮುಖಗಳ ಪ್ರೇಮಕಥೆ ಅಲ್ಲ. ಅಲ್ಲೊಂದು ನಿಗೂಢ ಲೋಕಕ್ಕೆ ಕರೆದುಕೊಂಡು ಹೋಗುವ ಟೈಂ ಟ್ರಾವೆಲ್ ಸ್ಟೋರಿಯೂ ಇದೆ. ಬನಾರಸ್ ಎಂದು ಹಿಂದೂಗಳ ಪವಿತ್ರ ಕ್ಷೇತ್ರ.. ಅಲ್ಲೊಬ್ಬಳು ಚೆಲುವೆ.. ಅವಳಿಗೆ ಮರುಳಾಗುವ ಚೆಲುವ.. ಮಧ್ಯೆ ಟೈಂ ಟ್ರಾವೆಲ್ ಸ್ಟೋರಿ.. ಅದು ಲವ್ ಕಮ್ ಕ್ರೈಂ ಕವ್ ಸೈಂಟಿಫಿಕ್ ಕಂ ಥ್ರಿಲ್ಲರ್ ಸ್ಟೋರಿ.
ಹೊಸ ಮುಖವಾದ ಝೈದ್ ಖಾನ್ ಹೊಸಬರು ಎನ್ನಿಸಲ್ಲ ಎನ್ನಿಸುವಂತೆ ಕಾಣಿಸುತ್ತಾರೆ. ಸೋನಲ್ ಮಂಥೆರೋ ಅಭಿನಯ ಮತ್ತು ಸೌಂದರ್ಯ ಎರಡರಲ್ಲೂ ಕಂಗೊಳಿಸಿದ್ದಾರೆ. ಅಚ್ಯುತ್, ದೇವರಾಜ್, ಸುಜಯ್ ಶಾಸ್ತ್ರಿ, ಸಪ್ನಾ ರಾಜ್, ಬರ್ಕತ್ ಅಲಿ.. ಎಲ್ಲರೂ ಹುಬ್ಬೇರಿಸುವಂತೆ ನಟಿಸಿದ್ದಾರೆ.
ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು ವಿ.ರವಿಚಂದ್ರನ್ ಮತ್ತು ಅರ್ಬಾಜ್ ಖಾನ್. ನಂತರ ಮಾತನಾಡಿದ ಅರ್ಬಾಜ್ ಖಾನ್ ಅಪ್ಪುರನ್ನು ನೆನಪಿಸಿಕೊಂಡರು. ನಿರ್ದೇಶಕ ಜಯತೀರ್ಥ ಅವರಿಗೆ ಧನ್ಯವಾದ ಹೇಳಿದ ಝೈದ್ ಖಾನ್ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ವಿನೀತರಾದರು. ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂದು ಥ್ರಿಲ್ಲಾದರು ಸೋನಲ್. ಸಿನಿಮಾ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ.