ಲೀಲಾ. ಕಾಂತಾರದ ಸಿಂಗಾರ ಸಿರಿಯೇ.. ಆಕೆ. ಫಾರೆಸ್ಟ್ ಗಾರ್ಡ್ ಆಗಬೇಕು ಅನ್ನೋದು ಅವಳ ಕನಸು ಮತ್ತು ಗುರಿ. ಕನಸು ಈಡೇರುತ್ತೆ. ಫಾರೆಸ್ಟ್ ಗಾರ್ಡ್ ಆದ ನಂತರ ಹಳ್ಳಿಯವರು ಮತ್ತು ಕಾಡಿನ ಅಧಿಕಾರಿಗಳ ನಡುವಿನ ಕೊಂಡಿಯಾಗುತ್ತಾಳೆ. ಅಲ್ಲಿಂದ ಕಥೆ ತಿರುವು ಪಡೆಯುತ್ತೆ.. ಕಥೆಯನ್ನು ಬಿಚ್ಚಿಡುತ್ತಾರೆ ಸಪ್ತಮಿ ಗೌಡ.
ಪಾಪ್ ಕಾರ್ನ್ ಮಂಕಿ ಟೈಗರ್ ಗಿರಿಜಾ, ಕಾಂತಾರದಲ್ಲಿ ಲೀಲಾ ಆಗಿ ಬದಲಾಗಿದ್ದಾರೆ. ಎರಡು ವರ್ಷಗಳ ನಂತರ ಇದು ಅವರ 2ನೇ ಚಿತ್ರ. ಚಿತ್ರದಲ್ಲಿ ನನ್ನದು ಮಂಗಳೂರು ಕನ್ನಡ ಮಾತನಾಡುವ ಪಾತ್ರ. ಟೀಮಿನವರು ಅದೆಷ್ಟು ಪರ್ಫೆಕ್ಟ್ ಇದ್ದರು ಅಂದ್ರೆ 2 ತಿಂಗಳ ವರ್ಕ್ ಶಾಪ್ ಮಾಡಿಸಿದರು. ಇದು ನನ್ನ ಪಾತ್ರ ಮತ್ತು ಅಭಿನಯದ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ನಾನು ಕ್ಯಾರೆಕ್ಟರ್ ಅರ್ಥ ಮಾಡಿಕೊಳ್ಳೋಕೆ ಸುಲಭವಾಯ್ತು ಎನ್ನುತ್ತಾರೆ ಸಪ್ತಮಿ ಗೌಡ.
ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. 2 ಕಿ.ಮೀ. ದಾರಿ ಸಾಗೋಕೆ 45 ನಿಮಿಷ ವ್ಯಯಿಸಿದ್ದೇವೆ. ಕಾಡಿನ ಬದುಕು ಕಷ್ಟ ಕಷ್ಟ ಎನ್ನುವ ಸಪ್ತಮಿಗೆ ಸಿಂಗಾರ ಸಿರಿಯೇ ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ.
ನಮ್ಮ ಚಿತ್ರತಂಡದ ಕ್ಯಾಪ್ಟನ್ ರಿಷಬ್ ಶೆಟ್ಟಿ. ಅವರ ಎನರ್ಜಿ ದೊಡ್ಡದು. ಒಂದು ಕಡೆ ನಟನೆ, ಇನ್ನೊಂದು ಕಡೆ ನಿರ್ದೇಶನ. ಇದೆಲ್ಲದರ ನಡುವೆ ಅವರಿಗೆ ಪ್ರತಿ ಪಾತ್ರದ ಸಣ್ಣ ಸಣ್ಣ ವ್ಯತ್ಯಾಸವನ್ನೂ ಗುರುತಿಸುವ ಪರಿಗೆ ಬೆರಗಾಗಿದ್ದಾರಂತೆ ಸಪ್ತಮಿ.
ಕಾಂತಾರ ಚಿತ್ರ ಇದೇ ಸೆ.30ರಂದು ಬಿಡುಗಡೆಯಾಗುತ್ತಿದ್ದು, 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದ ಪ್ರೀಮಿಯರ್ ಶೋಗಳು ಶುರುವಾಗಿವೆ.