ತೋತಾಪುರಿ ಸಿನಿಮಾದ ಬಾಗ್ಲು ತೆಗಿ ಮೇರಿ ಜಾನ್... ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ದೊಡ್ಡವರಿಂದ ಚಿಕ್ಕವರವರೆಗೂ, ದೇಶ - ವಿದೇಶದವರೂ ಫಿದಾ ಆಗಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ 'ತೋತಾಪುರಿ' ಹಾಡಿನದ್ದೇ ಕಲರವ..
ಇವೆಲ್ಲದರ ಜತೆಗೆ 'ಬಾಗ್ಲು ತೆಗಿ ಮೇರಿ ಜಾನ್' ೨೦೦ ಮಿಲಿಯನ್ ಹಿಟ್ಸ್ ಸೃಷ್ಟಿಸಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್ ಸೋಸಲೆ ಹಾಗೂ ಅನನ್ಯಾ ಭಟ್ ದನಿಗೂಡಿಸಿದ್ದಾರೆ.
'ತೋತಾಪುರಿ' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದೆ. ಕಾಮಿಡಿ ಸಿನಿಮಾವೊಂದು ಎರಡು ಭಾಗಗಳಲ್ಲಿ ಬರುತ್ತಿರುವುದು ಇದೇ ಮೊದಲು. ಸಿನಿಮಾ ಬಿಡುಗಡೆ ನಂತರ ಸಿರೀಸ್ ಆಗುವುದು ಬೇರೆ. ಸಿನಿಮಾ ಆರಂಭದಲ್ಲಿಯೇ ಎರಡು ಭಾಗಗಳಾಗಿ ಸಿನಿಮಾ ಮಾಡುವುದು ಬೇರೆ.
ಜಗ್ಗೇಶ್ ನಟಿಸಿರುವ ಸಿನಿಮಾಗಳ ಪೈಕಿ 'ತೋತಾಪುರಿ' ಬಿಗ್ ಬಜೆಟ್ ಸಿನಿಮಾ ಆಗಿದ್ದು, ಜಗ್ಗೇಶ್ ಎದುರು ಅದಿತಿ ಪ್ರಭುದೇವ ನಾಯಕಿ. ಡಾಲಿ ಧನಂಜಯ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ, ಹೇಮಾ ದತ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ. ತೋತಾಪುರಿಯಲ್ಲಿ ಹಾಸ್ಯದ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ಘಟನೆಗಳು ಇವೆ ಎಂದು ನರ‍್ದೇಶಕ ವಿಜಯ ಪ್ರಸಾದ್ ತಿಳಿಸಿದ್ದಾರೆ.