ಕರ್ಪೂರದ ಗೊಂಬೆ. 1996ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಅಕ್ಕ ಶೃತಿ ನಾಯಕಿಯಾಗಿದ್ದ ಚಿತ್ರದಲ್ಲಿ ಶರಣ್ ನಟಿಸಿದ್ದರು. ಶೃತಿಯ ಸೋದರಿಯನ್ನು ಮದುವೆಯಾಗುವ ಹುಡುಗನ ಪಾತ್ರವದು. ಪಾತ್ರವೂ ಹಿಟ್ ಆಗಿತ್ತು. ಚಿತ್ರವೂ ಹಿಟ್ ಆಗಿತ್ತು. ಆ ಪಾತ್ರ ನೋಡಿದ್ದವರಿಗೆ ಒಂದು ನೆನಪಿನಲ್ಲಿರುತ್ತೆ. ಮೀಸೆ ಹೊತ್ತ ಶರಣ್. ಆ ಚಿತ್ರದ ನಂತರ ಶರಣ್ ಮೀಸೆ ಹೊತ್ತು ಗಂಡಸಾಗುವ ಲಕ್ಕೇ ಸಿಗಲಿಲ್ಲ. ಈಗ ಜಡೇಶ್ ಕೆ.ಹಂಪಿ ಶರಣ್`ಗೆ ಮೀಸೆ ತೊಡಿಸಿದ್ದಾರೆ.
ಹಾಗಂತ ಮಧ್ಯೆ ಎಲ್ಲಿಯೂ ಹಾಕಿಲ್ಲ ಅಂತಿಲ್ಲ. ಬುಲೆಟ್ ಬಸ್ಯಾ ಚಿತ್ರದಲ್ಲಿ ಮೀಸೆ ತೊಟ್ಟಿದ್ದರೂ.. ಡಬಲ್ ರೋಲ್. ಮೀಸೆ ಇಲ್ಲದ ರೋಲ್ ಕೂಡಾ ಇತ್ತು. ಮೀಸೆಗೊಬ್ಬ.. ಆಸೆಗೊಬ್ಬ. ಆದರೆ.. ಗುರು ಶಿಷ್ಯರು ಚಿತ್ರದಲ್ಲಿ ಶರಣ್ ವೊರಿಜಿನಲ್ಲಾಗೇ ಮೀಸೆ ಬೆಳೆಸಿ ಪಿಟಿ ಮೇಷ್ಟರಾಗಿದ್ದಾರೆ.
1996ರ ನಂತರ ಮೀಸೆ ಬೆಳೆಸಿಕೊಂಡು ನಟಿಸಿರುವ ಚಿತ್ರ ಗುರು ಶಿಷ್ಯರು. ಹಾಗಾಗಿ ಇದೊಂಥರಾ ಸ್ಪೆಷಲ್. ಇದು 80ರ ದಶಕದ ಕಥೆ. ಆಗಿನ ಕಾಲದಲ್ಲಿ ಮೀಸೆ ಬಿಡುವುದೊಂದು ಪ್ಯಾಷನ್. ಮೀಸೆ ಬಿಟ್ಟರಷ್ಟೇ ಮರ್ಯಾದೆ ಎಂಬ ಸ್ಥಿತಿಯಿತ್ತು. ಆಗಿನ ಕಾಲಕ್ಕೆ ತಕ್ಕಂತೆ ಮೀಸೆ ಬಿಟ್ಟು ನಟಿಸಿದ್ದೇನೆ ಎನ್ನುವ ಶರಣ್ ಮೀಸೆಯ ಮರೆಯಲ್ಲೇ ನಗುತ್ತಾರೆನ್ನುವುದು ನೋಡೋಕೆ ಚೆಂದ ಚೆಂದ.
ಶರಣ್ ಪಿಟಿ ಮೇಷ್ಟ್ರಾದ ಮಾತ್ರ ಕಾಮಿಡಿ ಇಲ್ಲ ಎಂದೇನಿಲ್ಲ. ಶರಣ್ ಚಿತ್ರದಲ್ಲಿ ಕಾಮಿಡಿ ಇರಲೇಬೇಕು. ಜೊತೆಗೆ ಆಗಿನ ಕಾಲದಲ್ಲಿ ಮೇಷ್ಟ್ರುಗಳು ಮಕ್ಕಳನ್ನು ಬಯ್ಯೋಕೆ ಬಳಸುತ್ತಿದ್ದ ಪದಗಳನ್ನೆಲ್ಲ ಬಳಸಿಕೊಳ್ಳಲಾಗಿದೆಯಂತೆ. ಅಲ್ಲಿಗೆ 30 ದಾಟಿರುವವರಿಗೆಲ್ಲ ಹಳೆಯ ಕಾಲದ ನೆನಪಾದರೆ ಅಚ್ಚರಿಯಿಲ್ಲ.
ಶರಣ್ ಮನೋಹರ್ ಎಂಬ ಪಿಟಿ ಮೇಷ್ಟ್ರಾಗಿ ನಟಿಸಿದ್ದರೆ, ಹಾಲು ಮಾರುವ ಸುಜಾತ ಅಲಿಯಾಸ್ ಸೂಜಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಹಳ್ಳಿಮೇಷ್ಟ್ರು ರವಿಚಂದ್ರನ್‍ರನ್ನು ಸಿಕ್ಕಾಪಟ್ಟೆ ಇಷ್ಟಪಡುವ ಸೂಜಿ, ಪಿಟಿ ಮೇಷ್ಟ್ರ ಮೇಲೆ ಲವ್ವಾಗುತ್ತೆ. ಹಾಲು ಮಾರುವ ಹುಡುಗಿ ಕಣ್ಣ ನೋಟದಲ್ಲೇ ಬಾಣ ಬಿಡುತ್ತಾಳೆ. ಕಣ್ಣಿನಲ್ಲೇ ನಟಿಸಿದ್ದಾರೆ. ಖಂಡಿತಾ ಅವರಿಗೆ ಸ್ಯಾಂಡಲ್‍ವುಡ್`ನಲ್ಲಿ ಭವಿಷ್ಯ ಇದೆ ಎನ್ನುತ್ತಾರೆ ಶರಣ್.
ಸಿನಿಮಾ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಖೋಖೋ ಆಟದ ಬೇಸ್‍ನಲ್ಲೇ ಬೆಳೆಯುವ ಸ್ಟೋರಿ ಇದು.