ಇದೇ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿರುವ ಕಾಂತಾರ ಚಿತ್ರದ ಅನುಭವವನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಈ ಚಿತ್ರದ ಹೀರೋ ಕಮ್ ಡೈರೆಕ್ಟರ್. ವಿಜಯ್ ಕಿರಗಂದೂರು ನಿರ್ಮಾಣದ ಕಾಂತಾರ ಚಿತ್ರದಲ್ಲಿರೋದು ಪ್ರಕೃತಿ ಮತ್ತು ಮಾನವ ಸಂಘರ್ಷದ ಕಥೆ.
ಚಿತ್ರದಲ್ಲಿ ಕಂಬಳ ಕ್ರೀಡೆಯಿದೆ. ಸ್ಥಳೀಯ ಜನಪದ ಕಲೆಗಳಿವೆ. ಸ್ಥಳೀಯ ಕಲಾವಿದರಿಂದಲೇ ರೆಕಾರ್ಡ್ ಮಾಡಿಸಿರುವುದು ವಿಶೇಷ. ರಿಷಬ್ ಶೆಟ್ಟಿ ದೈವದ ಪಾತ್ರಿಯಾಗಿ ಬಣ್ಣ ಹಚ್ಚಿದ್ದಾರೆ. ದೈವದ ಪಾತ್ರಿಯಾಗಿ ಬಣ್ಣ ಹಚ್ಚಿದ್ದು ಒಂದು ದೈವಿಕ ಅನುಭವ ಎನ್ನುತ್ತಾರೆ ರಿಷಬ್ ಶೆಟ್ಟಿ. ಪೌರಾಣಿಕ ಶಿವನ ರೇಜ್ ಚಿತ್ರಕ್ಕಿದೆ. ಧರ್ಮಸ್ಥಳದ ಮಂಜುನಾಥನಿಂದಲೇ ಸಿನಿಮಾ ಶುರುವಾದದ್ದು. ಇಡೀ ಸಿನಿಮಾ ಒಂದು ಧಾರ್ಮಿಕಯಾತ್ರೆ ಎನ್ನುವ ರಿಷಬ್ ಶೆಟ್ಟಿ ಕಾಡುಬೆಟ್ಟು ಗ್ರಾಮದ ಕಥೆ ಹೇಳುವಾಗ ಹೇಳಿದ್ದೇ ನಾಸ್ತಿಕರು ಆಸ್ತಿಕರಾಗಿ ಹೋದ ಅನುಭವ.
ಚಿತ್ರದ ಬಹುಪಾಲು ಶೂಟಿಂಗ್ ಕಾಡುಬೆಟ್ಟು ಅನ್ನೋ ಗ್ರಾಮದಲ್ಲಿ ನಡೆಯುತ್ತೆ. ಅದು ಚಿತ್ರದಲ್ಲಿ ಬರುವ ಊರು. ಸುಮಾರು 10 ಎಕರೆ ಪ್ರದೇಶದಲ್ಲಿ ಹಾಕಿದ್ದ ಸೆಟ್`ನಲ್ಲಿ ಎಲ್ಲವೂ ಶಿಸ್ತುಬದ್ಧವಾಗಿತ್ತು. ಮಾಂಸ, ಮದ್ಯಕ್ಕೆಲ್ಲ ನಿಷೇಧ ಇತ್ತು. ಶುದ್ಧತೆ ಕಾಪಾಡಿಕೊಳ್ಳಲಾಗಿತ್ತು. ದೇವಸ್ಥಾನದಲ್ಲಿ ಕಾಪಾಡಿಕೊಳ್ಳುವ ಶುದ್ಧತೆ ಕಾಪಾಡಿಕೊಳ್ಳಲಾಗಿತ್ತು. ನಾಸ್ತಿಕರೂ ಚಿತ್ರದ ಕೊನೆಯಲ್ಲಿ ದೇವರಿಗೆ ಪೂಜೆ ಮಾಡಿ ನಮಸ್ಕಾರ ಮಾಡಿ ಹೋದರು.
ಚಿತ್ರದ ಬಗ್ಗೆ ಟ್ರೇಲರ್ ಬಿಟ್ಟಿದ್ದರೂ ಕಥೆ ಏನು ಅನ್ನೋದು ಮಾತ್ರ ಗುಟ್ಟಾಗಿಯೇ ಇದೆ. ರಿಷಬ್ ಶೆಟ್ಟಿ ಎದುರು ಸಪ್ತಮಿ ಗೌಡ ನಾಯಕಿ. ಅಚ್ಯುತ್ ಕುಮಾರ್ ಊರ ಧಣಿಯಾಗಿದ್ದರೆ, ಪ್ರಮೋದ್ ಶೆಟ್ಟಿ ರಾಜಕೀಯ ಪುಢಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿಯಷ್ಟೇ ಪ್ರಮುಖ ಪಾತ್ರ ಕಿಶೋರ್ ಅವರದ್ದು. ಫಾರೆಸ್ಟ್ ಆಫೀಸರ್ ಪಾತ್ರ.