ಧ್ರುವ ಸರ್ಜಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2012ಕ್ಕೆ. ಇಷ್ಟು ವರ್ಷದಲ್ಲಿ ನಟಿಸಿದ್ದು 4 ಚಿತ್ರಗಳಲ್ಲಿ ಮಾತ್ರ. ಸುಮಾರು 2010ರಲ್ಲಿಯೇ ಶುರುವಾದ ಮೊದಲ ಚಿತ್ರ ಅದ್ಧೂರಿ ಹೆಚ್ಚೂ ಕಡಿಮೆ 2 ವರ್ಷ ಸಮಯ ತೆಗೆದುಕೊಂಡಿತ್ತು. ಅದಾದ ನಂತರ ಬಂದ ಬಹದ್ದೂರ್ ಕಥೆಯೂ ಅಷ್ಟೆ. 2014ಕ್ಕೆ ಬಿಡುಗಡೆಯಾಯ್ತು. ಮಗದೊಮ್ಮೆ 2 ವರ್ಷ. ಭರ್ಜರಿ ಚಿತ್ರವಂತೂ 3 ವರ್ಷ ಸಮಯ ತೆಗೆದುಕೊಳ್ತು. 2012ಕ್ಕೆ ಅದ್ಧೂರಿ. 2014ಕ್ಕೆ ಬಹದ್ದೂರ್. 2017ಕ್ಕೆ ಭರ್ಜರಿ ರಿಲೀಸ್ ಆಯ್ತು. ಅದಾದ ಮೇಲೆ ಪೊಗರು. ಕೊರೋನಾ ಬಂತು 4 ವರ್ಷ ಲೇಟ್ ಆಯ್ತು. 2021ಕ್ಕೆ ರಿಲೀಸ್ ಆಯ್ತು. ಅದಾದ ಮೇಲೆ ಘೋಷಣೆಯಾಗಿದ್ದು ಮಾರ್ಟಿನ್. ಎಲ್ಲ ಪ್ಲಾನ್ ಪ್ರಕಾರವೇ ಆಗಿದ್ದರೆ ಇಷ್ಟು ಹೊತ್ತಿಗೆ ಥಿಯೇಟರಲ್ಲಿರಬೇಕಿತ್ತು ಮಾರ್ಟಿನ್. ಆದರೆ.. ಇಲ್ಲಿಯೂ ಬ್ಯಾಡ್ ಲಕ್ ಬೆನ್ನತ್ತಿದೆ.
ಉದಯ್ ಕೆ.ಮೆಹ್ತಾ ನಿರ್ಮಾಣದ ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರದ ಬಿಡುಗಡೆ 2023ಕ್ಕೆ ಹೋಗಿದೆ. ಧ್ರುವ ಸರ್ಜಾ ಅವರ ಕುಟುಂಬದಲ್ಲಿ ನಡೆದ ಬೆಳವಣಿಗೆಗಳಿಂದಾಗಿ ವಿಳಂಬವಾಗುತ್ತಲೇ ಇದ್ದು ಈಗ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಡೇಟ್ಸ್ ಹೊಂದಿಸುವುದೇ ಸವಾಲಾಗಿದೆ. ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಚಿತ್ರದ ಕ್ಲೈಮಾಕ್ಸ್ ಹಾಗೂ ಕೆಲವು ಮುಖ್ಯ ಭಾಗಗಳ ಚಿತ್ರೀಕರಣ ಬ್ಯಾಲೆನ್ಸ್ ಇದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.