ಡಾರ್ಲಿಂಗ್ ಕೃಷ್ಣಗೂ ಪುನೀತ್ ರಾಜಕುಮಾರ್ ಅವರಿಗೂ ವೃತ್ತಿ ಬದುಕಿನ ಸಂಬಂದವಷ್ಟೇ ಅಲ್ಲ. ಅದನ್ನೂ ಮೀರಿದ ಬಾಂಧವ್ಯವಾಗಿತ್ತು. ಅಪ್ಪು ಜೊತೆ ಈ ಹಿಂದೆ ನಟರಾಗಿ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಪ್ಪು ಅಕಾಲಿಕ ಮರಣದ ಸಂದರ್ಭದಲ್ಲಿ ಪುಟ್ಟ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ.. ವಿಧಿಯಾಟ ನೋಡಿ.. ಅಪ್ಪು ಅಭಿನಯಿಸಿರುವ ಕೊನೆಯ ಸಿನಿಮಾ ಲಕ್ಕಿಮ್ಯಾನ್ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ.
ಚಿತ್ರದಲ್ಲಿ ದೇವರು ಅಂದರೆ ಅಪ್ಪು, ದೇವಲೋಕಕ್ಕೆ ವಾಪಸ್ ಹೋಗುವಾಗ ನಾಯಕ ಡಾರ್ಲಿಂಗ್ ಕೃಷ್ಣ ನಿಮ್ಮನ್ನು ಕೊನೆಯದಾಗಿ ಅಪ್ಪಿಕೊಳ್ಳಲಾ ಎನ್ನುತ್ತಾರೆ. ಅಪ್ಪು ಅಪ್ಪಿಕೊಳ್ತಾನೆ. ಅಭಿಮಾನಿಗಳಿಗಂತೂ ಈಗ ಡಾರ್ಲಿಂಗ್ ಕೃಷ್ಣ ಅದೃಷ್ಟವಂತ ಎನಿಸಿಕೊಂಡುಬಿಟ್ಟಿದ್ದಾರೆ.
ಜನಕ್ಕೆ ಆ ಸೀನ್ ಎಷ್ಟು ಕನೆಕ್ಟ್ ಆಗಿದೆ ಅಂದ್ರೆ, ಅಭಿಮಾನಿಗಳು ಬರುತ್ತಾರೆ. ಅಪ್ಪು ಅವರನ್ನು ತಬ್ಬಿಕೊಂಡ ನೀವೇ ಲಕ್ಕಿಮ್ಯಾನ್. ನಿಮ್ಮನ್ನೊಮ್ಮೆ ತಬ್ಬಿಕೊಳ್ಳಲಾ ಎಂದು ಕಣ್ಣೀರು ಹಾಕುತ್ತಲೇ ಕೇಳುತ್ತಾರೆ. ತಬ್ಬಿಕೊಳ್ತಾರೆ. ಲಕ್ಕಿಮ್ಯಾನ್ ನಾನು ಎಂದೆಂದಿಗೂ ಮರೆಲಾಗದ ಸಿಹಿ ನೆನಪು ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.
ಮೊದ ಮೊದಲು ಅಶ್ವಿನಿ ಪುನೀತ್ ರಾಜಕುಮಾರ್ ಸಿನಿಮಾ ನೋಡಲು ಒಪ್ಪಲಿಲ್ಲ. ನಾವೆಲ್ಲ ಹೋಗಿ ಕರೆದ ಮೇಲೆ ಬಂದು ನೋಡಿ ಚಿತ್ರವನ್ನು ಮೆಚ್ಚಿಕೊಂಡರು. ದೇವರ ದರ್ಶನಕ್ಕೆ ದೇವಸ್ಥಾನಕ್ಕೆ ಹೋಗಬೇಕು. ಅಪ್ಪು ದರ್ಶನಕ್ಕೆ ಥಿಯೇಟರಿಗೇ ಬನ್ನಿ ಎಂದು ಮನವಿ ಮಾಡಿದ್ದಾರೆ ಲಕ್ಕಿಮ್ಯಾನ್.
ನಮ್ಮ ಚಿತ್ರದಲ್ಲಿ ನಟಿಸಿದರೂ ಅವರನ್ನು ಭೇಟಿ ಮಾಡೋಕೆ ಆಗಲಿಲ್ಲ. ಈಗಿನ ಪ್ರೇಕ್ಷಕರ ರಿಯಾಕ್ಷನ್ ನೋಡ್ತಿದ್ರೆ ಅಪ್ಪು ಅಭಿಮಾನ ಗೊತ್ತಾಗುತ್ತೆ. ಚಿತ್ರವನ್ನು ನೋಡುವಾಗಲಂತೂ ಗಂಟಲು ಹರಿಯುವಂತೆ ಕಿರುಚಿದ್ದೇನೆ ಎನ್ನುತ್ತಾರೆ ನಾಯಕಿ ಸಂಗೀತಾ ಶೃಂಗೇರಿ.
ಇದು ಅಪ್ಪು ಕೊಟ್ಟ ಗೆಲುವು. ಅವರೇ ನಿಂತು ಮುನ್ನಡೆಸಿದ ಸಿನಿಮಾ. ಅವರ ಆಶೀರ್ವಾದದಂತೆಯೇ ಗೆಲುವು ಸಿಕ್ಕಿದೆ ಎನ್ನುವುದು ಡೈರೆಕ್ಟರ್ ನಾಗೇಂದ್ರ ಪ್ರಸಾದ್ ಮಾತು.
ಡಾರ್ಲಿಂಗ್ ಕೃಷ್ಣ ಎದುರು ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್ ನಾಯಕಿಯರಾಗಿದ್ದಾರೆ. ಸಾಧು ಕೋಕಿಲ, ನಾಗಭೂಷಣ್, ಸುಧಾ ಬೆಳವಾಡಿ ನಟಿಸಿರೋ ಚಿತ್ರದಲ್ಲಿ ಪ್ರಭುದೇವ-ಅಪ್ಪು ಡ್ಯಾನ್ಸ್ ಕೂಡಾ ಹೈಲೈಟ್. ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರಕ್ಕೆ ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಪಕರು.