` ರಮೇಶ್ ಅರವಿಂದ್`ಗೆ ಗೌರವ ಡಾಕ್ಟರೇಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಮೇಶ್ ಅರವಿಂದ್`ಗೆ ಗೌರವ ಡಾಕ್ಟರೇಟ್
Ramesh Aravind Image

ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ. ಅಲ್ಲಿಗೆ ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ.ರಾಜ್, ವಿಷ್ಣು, ಅಂಬಿ, ಶಿವಣ್ಣ, ರವಿಚಂದ್ರನ್.. ಮೊದಲಾದವರ ಸಾಲಿಗೆ ರಮೇಶ್ ಕೂಡಾ ಸೇರ್ಪಡೆಗೊಂಡಿದ್ದಾರೆ.

ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಮತ್ತು ಸಾಧನೆಗಾಗಿ ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. 1986ರಲ್ಲಿ ಸುಂದರ ಸ್ವಪ್ನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ರಮೇಶ್ ಅರವಿಂದ್. ಕನ್ನಡದಲ್ಲಿಯೇ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮೇಶ್ ತಮಿಳಿನಲ್ಲಿ 30ಕ್ಕೂ ಹೆಚ್ಚು, ತೆಲುಗಿನಲ್ಲಿ 10, ಹಿಂದಿಯಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಮೊದಲು ನಟಿಸಿದ್ದ ಚಿತ್ರ ಮೌನಗೀತೆಯಾದರೂ ಅಧಿಕೃತವಾಗಿ ರಿಲೀಸ್ ಆದ ಮೊದಲ ಸಿನಿಮಾ ಸುಂದರ ಸ್ವಪ್ನಗಳು. ಪುಷ್ಪಕ ವಿಮಾನ ರಮೇಶ್ ಅರವಿಂದ್ ಅವರ 100ನೇ ಸಿನಿಮಾ. ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೆ, ಉಲ್ಟಾ ಪಲ್ಟಾ, ಅಮೃತ ವರ್ಷಿಣಿ.. ರಮೇಶ್ ಅವರು ನಟಿಸಿದ ಒಂದು ವರ್ಷಕ್ಕೂ ಹೆಚ್ಚು ಪ್ರದರ್ಶನಗೊಂಡ ಚಿತ್ರಗಳು.

ಹೂಮಳೆ, ಅಮೃತಧಾರೆ ಬರಹಗಾರರಾಗಿ ಗೆದ್ದ ರಮೇಶ್ ರಾಮಾ ಶಾಮ ಭಾಮಾ ಚಿತ್ರದ ಮೂಲಕ ನಿರ್ದೇಶಕರೂ ಆದರು.

ನಿರೂಪಕರಾಗಿ ವೀಕೆಂಡ್ ವಿತ್ ರಮೇಶ್, ಪ್ರೀತಿಯಿಂದ ರಮೇಶ್, ರಾಜ ರಾಣಿ ರಮೇಶ್, ಕನ್ನಡದ ಕೋಟ್ಯಧಿಪತಿಗಳ ನಿರೂಪಕರಾಗಿಯೂ ಗೆದ್ದವರು ರಮೇಶ್ ಅರವಿಂದ್. ಕಿರುತೆರೆ ಧಾರಾವಾಹಿಗಳ ನಿರ್ಮಾಪಕರೂ ಹೌದು. ನಂದಿನಿ ಹಾಗೂ ಸುಂದರಿ ಧಾರಾವಾಹಿಗಳ ನಿರ್ಮಾಪಕರಲ್ಲಿ ಒಬ್ಬರು ರಮೇಶ್. ಸಾಹಿತಿಗಳೂ ಹೌದು.

ಇದೀಗ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಸಹಯೋಗದ 7 ವಂಡರ್ಸ್ ಕರ್ನಾಟಕ ಕ್ಯಾಂಪೇನ್`ನ ರಾಯಭಾರಿಯೂ ಹೌದು.

ರಾಜ್ಯಪ್ರಶಸ್ತಿ, ಫಿಲ್ಮ್‍ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ರಮೇಶ್ ಅರವಿಂದ್ ಅವರಿಗೆ ಈಗ ಗೌರವ ಡಾಕ್ಟರೇಟ್ ಕೂಡಾ ಸಂದಿದೆ. ಸೆಪ್ಟೆಂಬರ್ 14ರಂದು ಸುವರ್ಣ ಸೌಧದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಕಾರ್ಯಕ್ರಮ ನಡೆಯಲಿದೆ.