ನರ್ತಕಿಯಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಹೊಸ ಸಿನಿಮಾಗಳ ಓಪನಿಂಗ್ ನಿಂತೇ ಹೋಗಿತ್ತು. ಒಂದು ಕಾಲದಲ್ಲಿ ಸಂತೋಷ್, ನರ್ತಕಿ, ಸಪ್ನಾ ಚಿತ್ರಮಂದಿರಗಳು ಮೆಜೆಸ್ಟಿಕ್ ಹಾಗೂ ಗಾಂಧಿನಗರದ ಹೃದಯಗಳಾಗಿದ್ದವು. ಈಗ ಹೃದಯಗಳಿಗೆ ಹೊಸ ರಕ್ತ ಅರ್ಥಾತ್ ಚಿತ್ರಗಳೇ ಬರುತ್ತಿಲ್ಲ. ಅದನ್ನು ಈಗ ನಿವಾರಿಸಿರೋದು ಲಕ್ಕಿಮ್ಯಾನ್.
ಲಕ್ಕಿಮ್ಯಾನ್ ಚಿತ್ರಕ್ಕೆ ಹೀರೋ ಡಾರ್ಲಿಂಗ್ ಕೃಷ್ಣ. ಪುನೀತ್ ಅತಿಥಿನಟರಾಗಿದ್ದಾರೆ. ಆದರೆ ಸ್ಕ್ರೀನ್ ಮೇಲೆ ಸುಮಾರು 40 ನಿಮಿಷ ಇರುತ್ತಾರೆ. ಒಬ್ಬ ನಟನಾಗಿ ಪುನೀತ್ ನಟಿಸಿರೋ ಕೊನೆಯ ಸಿನಿಮಾ ಲಕ್ಕಿಮ್ಯಾನ್. ದೇವರಾಗಿ ನಟಿಸಿದ್ದಾರೆ. ಪುನೀತ್ ಅವರ ಅದೃಷ್ಟದ ಥಿಯೇಟರುಗಳಲ್ಲಿ ಒಂದು ನರ್ತಕಿ. ನರ್ತಕಿಯಲ್ಲಿ ರಿಲೀಸ್ ಆಗಿರುವ ಎಲ್ಲ ಚಿತ್ರಗಳೂ ಸೂಪರ್ ಹಿಟ್. ಆ ಚಿತ್ರಮಂದಿರದಲ್ಲೀಗ ಲಕ್ಕಿಮ್ಯಾನ್ ರಿಲೀಸ್ ಆಗುತ್ತಿದೆ.
400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರೋ ಲಕ್ಕಿಮ್ಯಾನ್, ದೇಶದಾದ್ಯಂತ ತೆರೆ ಕಾಣುತ್ತಿರೋದು ವಿಶೇಷ. ಡಾರ್ಲಿಂಗ್ ಕೃಷ್ಣ ಎದುರು ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್ ನಾಯಕಿಯರಾಗಿದ್ದಾರೆ. ಸಾಧು ಕೋಕಿಲ, ನಾಗಭೂಷಣ್, ಸುಧಾ ಬೆಳವಾಡಿ ಇನ್ನುಳಿದ ಪಾತ್ರಗಳಲ್ಲಿದ್ದಾರೆ. ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಅವರ ಅಣ್ಣ ಪ್ರಭುದೇವ ಕೂಡಾ ಸ್ಟೆಪ್ಸ್ ಹಾಕಿದ್ದಾರೆ. ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಣದ ಚಿತ್ರ ನಾಳೆ ದೇಶದಾದ್ಯಂತ ತೆರೆ ಕಾಣುತ್ತಿದೆ.