ಬಾಯ್ಕಾಟ್..ಬಾಯ್ಕಾಟ್..ಬಾಯ್ಕಾಟ್.. ಬಾಲಿವುಡ್‍ನಲ್ಲಿ ಘಟಾನುಘಟಿ ಚಿತ್ರಗಳನ್ನು ಸೋಲಿಸಿದ ಟ್ರೆಂಡ್. ಅಮೀರ್ ಖಾನ್, ಕರೀನಾ ಕಪೂರ್, ಶಾರೂಕ್ ಖಾನ್, ರಣಬೀರ್ ಕಪೂರ್, ಅಲಿಯಾ ಭಟ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ಸೈಫ್ ಅಲಿ ಖಾನ್.. ಒಬ್ಬಿಬ್ಬರಲ್ಲ. ಹಿಂದೂ, ಹಿಂದುತ್ವದ ಕುರಿತ ನಕಾರಾತ್ಮಕ ಹೇಳಿಕೆಗಳು ಹಾಗೂ ಒನ್ ಸೈಡೆಡ್ ಅಜೆಂಡಾಗಳು ಇದಕ್ಕೆ ಕಾರಣವಾಗಿರೋದು ಸುಳ್ಳಲ್ಲ. ಇದಕ್ಕೆ ಪ್ರತಿಯಾಗಿ ಹಿಂದುತ್ವದ ಹಾಗೂ ಮೋದಿ ಪರ ನಿಂತ ಕಾರಣಕ್ಕೆ ಅಕ್ಷಯ್ ಕುಮಾರ್, ಕಂಗನಾ ರಣಾವತ್ ಚಿತ್ರಗಳು ಕೂಡಾ ಬಾಯ್ಕಾಟ್ ಬಿಸಿ ಅನುಭವಿಸಿದೆ. ಈಗ ಇದು ಸ್ಯಾಂಡಲ್‍ವುಡ್‍ಗೂ ತಟ್ಟಿದೆ.
ಸ್ಯಾಂಡಲ್`ವುಡ್`ಗೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರನ ಎಂಟ್ರಿಯಾಗುತ್ತಿದೆ. ಝೈದ್ ಖಾನ್ ಹೀರೋ ಆಗಿರೋ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ. ಸೋನಲ್ ಮಂಥೆರೋ ನಾಯಕಿ. ಜಯತೀರ್ಥ ಬೆಲ್ ಬಾಟಂ, ಒಲವೇ ಮಂದಾರದಂತಾ ವಿಭಿನ್ನ ಚಿತ್ರಗಳನ್ನು ನೀಡಿರುವ ನಿರ್ದೇಶಕ. ಸೋನಲ್ ಮಂಥೆರೋ ಕೂಡಾ ಪಂಚತಂತ್ರದ ಮೂಲಕ ಗಮನ ಸೆಳೆದ ಪ್ರತಿಭಾವಂತೆ. ಆದರೆ ಬಾಯ್ಕಾಟ್‍ಗೆ ಕಾರಣವಾಗಿರೋದು ಝೈದ್ ಖಾನ್. ಅವರು ಜಮೀರ್ ಪುತ್ರ ಎನ್ನುವುದೇ ಕಾರಣ.
ಜಮೀರ್ ಅಹ್ಮದ್ ಮುಸ್ಲಿಮರ ನಾಯಕ ಎನ್ನುವುದಷ್ಟೇ ಅಲ್ಲ.. ಹಿಂದೂಗಳ ವಿರೋಧಿ ಅನ್ನೋ ಹಣೆಪಟ್ಟವನ್ನು ಕೂಡಾ ಕಟ್ಟಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಣೇಶ ಹಬ್ಬಕ್ಕೆ ಶುಭ ಕೋರುವ ಜಮೀರ್, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂರಿಸಲು ಅಡ್ಡಿಯಾಗುತ್ತಾರೆ. ತಾವೇ 2006ರಲ್ಲಿ ಮಾಡಿದ್ದ ಒಡಂಬಡಿಕೆಯನ್ನೂ ನಿರಾಕರಿಸುತ್ತಾರೆ. ಸುಪ್ರೀಂಕೋರ್ಟಿನವರೆಗೂ ವಿವಾದ ಕೊಂಡೊಯ್ಯುತ್ತಾರೆ ಎನ್ನುವುದು ಒಂದು ಕಾರಣವಾದರೆ, ಕೊಡವರು ಮತ್ತು ಮಲಬಾರ್ ಕ್ರೈಸ್ತರ ಪಾಲಿನ ಖಳನಾಯಕ ಟಿಪ್ಪು ಸುಲ್ತಾನ್ ಬಗ್ಗೆ ಹಾಡಿ ಹೊಗಳುತ್ತಾರೆ. ಹೀಗಾಗಿಯೇ ಝೈದ್ ಖಾನ್ ಚಿತ್ರವನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಕೂಗು ಸೋಷಿಯಲ್ ಮೀಡಿಯಾಗಳಲ್ಲಿ ಶುರುವಾಗಿದೆ.
ಅದೇ ಕಾರಣಕ್ಕೆ ಏನೋ ಜಮೀರ್ ಅಹ್ಮದ್ ತಮ್ಮ ಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಗಣೇಶನನ್ನು ಕೂರಿಸಿದ್ದಾರೆ. ಝೈದ್ ಖಾನ್ ಕೂಡಾ ಗಣೇಶ ಹಬ್ಬಕ್ಕೆ ತೆರಳಿ ಪೂಜೆ ಮಾಡಿಸಿದ್ದಾರೆ.
ಇನ್ನೂ ಒಂದು ವಿಶೇಷವಿದೆ. ಬನಾರಸ್ ಎಂದರೆ ಕಾಶಿ. ಆ ಬನಾರಸ್ ಸುತ್ತಲೇ ಇರೋ ಕಥೆಯಲ್ಲಿ ಝೈದ್ ಖಾನ್ ನಾಯಕ. ಚಿತ್ರ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರದ ಕುರಿತ ಬಾಯ್ಕಾಟ್ ಜೋರಾಗುವ ಸುಳಿವುಗಳೂ ಜೋರಾಗಿವೆ.