ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ.. ರತ್ನದಂತಾ ಮಗಳು ಊರಿಗೆಲ್ಲ..
ಬಲುಜಾಣೆ ಗಂಭೀರೆ.. ಹೆಸರು ಸೀತಾದೇವಿ.. ಹನ್ನೆರಡು ತುಂಬಿಹುದು ಮದುವೆಯಿಲ್ಲ..
ಕೆ.ಎಸ್.ನರಸಿಂಹ ಸ್ವಾಮಿ ಅವರ ಕವಿತೆ ಕೇಳದವರೇ ಇಲ್ಲ. ಆ ಕವಿತೆಯ ಮೊದಲ ಸಾಲನ್ನಿಟ್ಟುಕೊಂಡೇ ಸಿನಿಮಾ ಮಾಡಲು ಹೊರಟಿದ್ದಾರೆ ಕೋಡ್ಲು ರಾಮಕೃಷ್ಣ. ಅಂದಹಾಗೆ ಇದು ಕಾದಂಬರಿ ಆಧರಿತ ಚಿತ್ರ. ಭಾಗ್ಯ ಕೃಷ್ಣಮೂರ್ತಿ ಎಂಬುವವರು ಬರೆದ ಶಾನುಭೋಗರ ಮಗಳು ಕಾದಂಬರಿಯನ್ನೇ ಸಿನಿಮಾ ಮಾಡುತ್ತಿದ್ದಾರೆ ಕೋಡ್ಲು.
ಸ್ವಾತಂತ್ರ್ಯ ಪೂರ್ವದ ಕಥೆ ಇದು. ಶ್ಯಾನುಭೋಗರ ಮಗಳು ಮದುವೆಯಾದ ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಕಥೆ ಚಿತ್ರದಲ್ಲಿದೆ. ಸಸ್ಪೆನ್ಸ್ ಥ್ರಿಲ್ಲಿಂಗ್ ಅಂಶಗಳೂ ಚಿತ್ರದಲ್ಲಿವೆ ಎಂದಿದ್ದಾರೆ ಕೋಡ್ಲು ರಾಮಕೃಷ್ಣ. ಭುವನ್ ಫಿಲಮ್ಸ್ ಚಿತ್ರವನ್ನ ನಿರ್ಮಾಣ ಮಾಡುತ್ತಿದೆ.
ಶ್ಯಾನುಭೋಗರ ಮಗಳು ಚಿತ್ರಕ್ಕೆ ನಾಯಕಿ ರಾಗಿಣಿ ಚಂದ್ರನ್. ಪ್ರಜ್ವಲ್ ದೇವರಾಜ್ ಪತ್ನಿ. ದೇವರಾಜ್ ಸೊಸೆ. ಈ ಹಿಂದೆ ಲಾ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಿದ್ದರು. ಜಾಹೀರಾತುಗಳಲ್ಲೂ ಕಾಣಿಸಿಕೊಂಡಿರುವ ರಾಗಿಣಿ ಚಂದ್ರನ್ ಮತ್ತೊಮ್ಮೆ ನಾಯಕಿಯ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಬಿ.ಎ.ಮಧು ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ.