ಲಕ್ಕಿಮ್ಯಾನ್ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ. ಚಾರ್ಲಿ 777 ನಂತರ ಸಂಗೀತಾ ನಟಿಸುತ್ತಿರೋ ಸಿನಿಮಾ. ಇದು ಅಪ್ಪು ಅಭಿನಯದ ಕೊನೆಯ ಚಿತ್ರವೂ ಹೌದು. ಆದರೆ ಅಪ್ಪು ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವಂತೆ.
ಅಪ್ಪು ಸರ್ ಜೊತೆ ನಾನು ಡ್ಯಾನ್ಸ್ ಶೂಟ್ನಲ್ಲಿ ಭೇಟಿಯಾಗುತ್ತೇವೆ ಎಂದುಕೊಂಡಿದ್ದೆ. ಕೊನೆಯಲ್ಲಿ ಎಲ್ಲವೂ ಬದಲಾಗಿ ಹೋಯ್ತು. ಡ್ಯಾನ್ಸ್ ಶೂಟಿಂಗ್ಗೆ ಬರೋಕೆ ಆಗಲಿಲ್ಲ. ಆದರೆ ಪ್ರೆಸ್ಮೀಟ್ನಲ್ಲಿ ಸಿಗುತ್ತೇನೆ ಎಂದುಕೊಂಡಿದ್ದೆ. ವಿಧಿಯಾಟವೇ ಬೇರೆಯಾಗಿತ್ತು ಎಂದು ಭಾವುಕರಾಗುತ್ತಾರೆ ಸಂಗೀತಾ ಶೃಂಗೇರಿ.
ನಟನೆ ಕೂಡಾ ದೊಡ್ಡ ಜವಾಬ್ದಾರಿ. ಈಸಿ ವರ್ಕ್ ಅಲ್ಲ. ಪಾತ್ರ ಯಾವುದೇ ಇರಲಿ, ಅದಕ್ಕೆ ಡೆಡಿಕೇಷನ್ ಇರಬೇಕು. ಹರಹರ ಮಹಾದೇವ ಸೀರಿಯಲ್ನಿಂದಲೂ ನಾನು ಪಾಲಿಸಿಕೊಂಡು ಬಂದಿರುವ ತತ್ವ ಇದು ಎನ್ನುವ ಸಂಗೀತಾಗೆ ಲಕ್ಕಿಮ್ಯಾನ್ ಚಿತ್ರದಲ್ಲಿನ ಕಥೆ ಹಾಗೂ ನನ್ನ ಪಾತ್ರ ಎರಡೂ ಇಷ್ಟವಾಗಿದೆ. ಖಂಡಿತಾ ಸಕ್ಸಸ್ ಆಗುತ್ತೆ ಎನ್ನುತ್ತಾರೆ.
ಇದು ನಾನ್ ಕಡವುಳೆ ಚಿತ್ರದ ರೀಮೇಕ್. ಡೈರೆಕ್ಟರ್ ಮೊದಲು ರೀಮೇಕ್ ಹಾಗೂ ಇಬ್ಬರು ನಾಯಕಿಯರು ಎಂದಾಗ ನಾನು ಬೇಡ ಎನ್ನುತ್ತಿದೆ. ಇಬ್ಬರು ಹೀರೋಯಿನ್ಸ್ ಇರೋ ಚಿತ್ರದಲ್ಲಿ ನಟಿಸಬಾರದು ಎಂದು ನನಗೆ ನಾನೇ ಹಾಕಿಕೊಂಡಿರುವ ಬೌಂಡರಿ ಲೈನ್. ಆದರೆ ನಿರ್ದೇಶಕರು ಒಂದ್ ಸಾರಿ ನೋಡಿ ಎಂದು ಬಲವಂತ ಮಾಡಿದಾಗ ಕಥೆ ಹಾಗೂ ಅನು ಪಾತ್ರದೊಳಗೆ ಕಳೆದುಹೋದೆ. ಇದು ನಮ್ಮ ಬಾಲ್ಯವನ್ನು ನೆನಪಿಸುವ ಪಾತ್ರ ಎನ್ನುತ್ತಾರೆ ಸಂಗೀತಾ ಶೃಂಗೇರಿ.
ಡಾರ್ಲಿಂಗ್ ಕೃಷ್ಣ ಹೀರೋ ಆಗಿರೋ ಚಿತ್ರದಲ್ಲಿ ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್ ನಾಯಕಿಯರು. ನಾಗೇಂದ್ರ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ಹಾಗೂ ಪ್ರಭುದೇವ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಣದ ಸಿನಿಮಾ ಇದು.