ಹೆಸರಿನಲ್ಲಿ ಬಿರುದಿನಲ್ಲಿ ಕಿಚ್ಚಿದೆಯಾದರೂ.. ಹಚ್ಚುವುದು ಮಾತ್ರ ದೀಪ. ಹೀಗಾಗಿಯೇ ಈತ ನಮ್ಮ ಸುದೀಪ. ಇದು ಅಭಿಮಾನಿಗಳು ಹಾಗೂ ಸುದೀಪ್ ಅವರಿಂದ ನೆರವು ಪಡೆದವರು ಹೇಳುವ ಮಾತು. ಟ್ರಸ್ಟ್ ಮೂಲಕ, ವೈಯಕ್ತಿಕವಾಗಿ ಹಾಗೂ ಅಭಿಮಾನಿಗಳ ಮೂಲಕ ನೂರಾರು ಸಮಾಜಸೇವಾ ಕೆಲಸ ಮಾಡುತ್ತಿರೋ ಸುದೀಪ್ ಕೇವಲ ಅಭಿನಯ ಚಕ್ರವರ್ತಿಯಲ್ಲ. ಈ ಮಾಣಿಕ್ಯ ಈಗ ಪುಣ್ಯಕೋಟಿಯೂ ಹೌದು.
ರಾಜ್ಯ ಸರ್ಕಾರದ ಪಶು ಸಂಗೋಪನಾ ಇಲಾಖೆ ಜಾನುವಾರುಗಳ ರಕ್ಷಣೆ, ಹೈನುಗಾರಿಕೆಗೆ ಉತ್ತೇಜನ ಮುಂತಾದ ಕೆಲಸಗಳಿಗಾಗಿ ಪುಣ್ಯಕೋಟಿ ಯೋಜನೆ ಜಾರಿಗೆ ತಂದಿದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ರಾಯಭಾರಿ ಕೋಟಿಗೊಬ್ಬ ಸುದೀಪ.
ಈ ಯೋಜನೆಯ ರಾಯಭಾರಿಯಾಗಲು ಸುದೀಪ್ ಸಂಭಾವನೆ ಪಡೆದಿಲ್ಲ. ಈ ಹಿಂದೆ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸುದೀಪ್ ಅವರಿಗೆ ಪತ್ರ ಬರೆದು ರಾಯಭಾರಿಯಾಗಲು ಕೋರಿದ್ದರು. ಈ ಯೋಜನೆಗೆ ಉಚಿತವಾಗಿ ಯಾವುದೇ ಸಂಭಾವನೆ ಪಡೆಯದೆ ಪ್ರಚಾರ ಮಾಡಲು ಸುದೀಪ್ ಒಪ್ಪಿದ್ದಾರೆ. ಇದು ನಮಗೆ ಆನೆಬಲ ತಂದಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸಚಿವ ಪ್ರಭು ಚವ್ಹಾಣ್.