ಕೆಜಿಎಫ್ ಸಿನಿಮಾ ಹಲವರಿಗೆ ಹಲವು ರೀತಿಯಲ್ಲಿ ಸ್ಫೂರ್ತಿ ನೀಡಿದೆ. ಚಿತ್ರರಂಗದವರಿಗೆ ಕೆಜಿಎಫ್ ಒಂದು ಮೈಲಿಗಲ್ಲು. ಕನ್ನಡ ಸಿನಿಮಾವನ್ನೂ ಗ್ಲೋಬಲ್ ಲೆವೆಲ್ಲಿಗೆ ತೆಗೆದುಕೊಂಡು ಹೋಗಬಹುದು ಎಂಬ ಸ್ಫೂರ್ತಿ ನೀಡಿದ ಸಿನಿಮಾ. ಹೀಗಾಗಿ ಅದು ಕೇವಲ ಕನ್ನಡದಲ್ಲಷ್ಟೇ ಅಲ್ಲ ಬೇರೆ ಭಾಷೆಯವರಿಗೂ ಸ್ಫೂರ್ತಿ ತುಂಬುತ್ತಿದೆ. ಚಿತ್ರದಲ್ಲಿನ ತಾಯಿ-ಮಗನ ಸೆಂಟಿಮೆಂಟ್ ಇನ್ನಷ್ಟು ಮಂದಿಗೆ ಸ್ಫೂರ್ತಿ ನೀಡುತ್ತಿದೆ. ಆದರೆ ಮಧ್ಯಪ್ರದೇಶದಲ್ಲೊಬ್ಬನಿಗೆ ಕೆಜಿಎಫ್‍ನ ರಾಕಿಭಾಯ್ ಕೆಟ್ಟ ರೀತಿಯಲ್ಲಿ ಸ್ಫೂರ್ತಿಯಾಗಿದ್ದಾನೆ.
ಮಧ್ಯಪ್ರದೇಶದಲ್ಲಿ ಶಿವಪ್ರಸಾದ್ ದುವೆ ಎಂಬ ಯುವಕ ಐವರನ್ನು ಕೊಂದು ಹಾಕಿದ್ದಾನೆ. ಅವರಲ್ಲಿ ನಾಲ್ವರು ಸೆಕ್ಯುರಿಟಿ ಗಾರ್ಡುಗಳು. ಕೊಲೆ ಮಾಡಿದವನೊಬ್ಬನ ಮೊಬೈಲ್ ಕದ್ದುಕೊಂಡು ಹೋಗಿದ್ದ ಶಿವ ಪ್ರಸಾದ್ ಆ ಮೊಬೈಲಿನಿಂದಲೇ ಸಿಕ್ಕು ಬಿದ್ದಿದ್ದಾನೆ. ಏಕಯ್ಯಾ ಕೊಂದೆ ಎಂದರೆ ನಾನೂ ರಾಕಿಭಾಯ್ ಹಾಗೆ ಫೇಮಸ್ ಆಗಬೇಕು ಎಂದು ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನಂತೆ. ಅಂದಹಾಗೆ ಅವನಿಗಿನ್ನೂ 19 ವರ್ಷ.
ಈ ಸೀರಿಯಲ್ ಕಿಲ್ಲರ್ ಎಲ್ಲರನ್ನೂ ಕೊಂದಿರುವುದು ಒಂದೇ ರೀತಿ. ರಸ್ತೆ ಬದಿ ಮಲಗಿರುತ್ತಿದ್ದವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲುವುದು. ಒಂದು ರೀತಿ ಸೈಕೋ. ಇವನಿಗೆ ಆಗಲೇ ಅಲ್ಲಿನ ಮೀಡಿಯಾಗಳು ಸ್ಟೋನ್ ಕಿಲ್ಲರ್ ಎಂದು ಕರೆಯುತ್ತಿದ್ದವು. ಇವನು ಕೆಜಿಎಫ್ ಚಿತ್ರವನ್ನು ಲೆಕ್ಕವಿಲ್ಲದಷ್ಟು ಸಾರಿ ನೋಡಿದ್ದನಂತೆ.