ದಿವ್ಯಸ್ಪಂದನ ರಮ್ಯಾ ಮತ್ತೆ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಯುವ ಘಟಕದ ಪ್ರಭಾವಿ ನಾಯಕಿಯಾಗಿದ್ದ ರಮ್ಯಾ ಈಗ ರಾಜಕೀಯಕ್ಕೆ ಗುಡ್ ಬೈ ಹೇಳಿದಂತಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ರಾಜಕೀಯ ಹೇಳಿಕೆ ಕೊಡುವುದು ಬಿಟ್ಟರೆ ರಮ್ಯಾ ರಾಜಕೀಯ ಫುಲ್ ಸೈಲೆಂಟ್. ಒಮ್ಮೆ ಸಂಸದೆಯೂ ಆಗಿದ್ದ ರಮ್ಯಾ ಮತ್ತೆ ರಾಜಕೀಯಕ್ಕೆ ಬರ್ತಾರಾ?
ಇತ್ತೀಚೆಗಷ್ಟೇ ಆಪಲ್ ಬಾಕ್ಸ್ ಮೂಲಕ ಎರಡು ಸಿನಿಮಾ ನಿರ್ಮಿಸುವ ಘೋಷಣೆ ಮಾಡಿದ್ದ ರಮ್ಯಾ ಆ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇದರ ಜೊತೆಯಲ್ಲಿ ರಕ್ಷಿತ್ ಶೆಟ್ಟಿ ಅಥವಾ ರಾಜ್ ಬಿ.ಶೆಟ್ಟಿ ಚಿತ್ರದಲ್ಲಿ ನಟಿಸುವ ಸುಳಿವನ್ನೂ ಕೊಟ್ಟಿದ್ದಾರೆ. ಯಾರೋ ಒಬ್ಬ ಶೆಟ್ಟರ ಚಿತ್ರದಲ್ಲಿ ನಟಿಸುವುದು ಪಕ್ಕಾ ಎಂದಿರೋ ರಮ್ಯಾ ಅದು ಯಾವ ಶೆಟ್ಟಿ ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಸ್ಕ್ರಿಪ್ಟ್ ಇಷ್ಟವಾಗಿದೆಯಂತೆ.
ಇದರ ಜೊತೆಗೆ ಹೊಸಬರಿಗೂ ಅವಕಾಶವಿದೆ. ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡುವ ಮನಸ್ಸಿದೆ ಎಂದಿರುವ ರಮ್ಯಾಗೆ ಎದುರಾಗಿರುವ ಇನ್ನೊಂದು ಪ್ರಶ್ನೆ ರಾಜಕೀಯದ್ದು. ನೀವು ರಾಜಕೀಯಕ್ಕೆ ಮತ್ತೆ ವಾಪಸ್ ಬರ್ತೀರಾ ಎಂಬ ಪ್ರಶ್ನೆಗೆ ರಮ್ಯಾ ಕೊಟ್ಟಿರುವ ಉತ್ತರ ಇಷ್ಟು.
ಖಂಡಿತಾ. ಮರೆಯದೆ ವೋಟು ಹಾಕುತ್ತೇನೆ. ಮತ ಹಾಕುವುದನ್ನು ಮಾತ್ರ ತಪ್ಪಿಸಿಕೊಳ್ಳಲ್ಲ. ಆ ಮೂಲಕ ರಾಜಕೀಯದಲ್ಲಿರುತ್ತೇನೆ ಎಂದು ನಕ್ಕಿದ್ದಾರೆ. ಈ ಉತ್ತರ ಮತ್ತು ನಗುವಿನ ಅರ್ಥ ಇಷ್ಟೆ.
ರಮ್ಯಾ ಇನ್ನು ಮುಂದೆ ಸ್ಪರ್ಧಾ ರಾಜಕೀಯಕ್ಕೆ ಬರಲ್ಲ. ಆದರೆ ಕಾಂಗ್ರೆಸ್ ಜೊತೆ ಬಾಂಧವ್ಯ ಇಟ್ಟುಕೊಳ್ಳಬಹುದು. ಅಥವಾ ದೂರವಾಗಲೂಬಹುದು. ಇದರ ನಡುವೆ ರಾಜಕೀಯ ಪಡಸಾಲೆಯಲ್ಲಿ ಏಳುವ ಕಥೆಗಳೆಲ್ಲ ಅಂತೆ..ಕಂತೆ..ಗಳ ಊಹಾಪೋಹಗಳಷ್ಟೆ.