ಹೆಚ್ಚೂ ಕಡಿಮೆ ದಶಕವೇ ಆಗಿ ಹೋಗಿತ್ತು. ರಮ್ಯಾ ಚಿತ್ರರಂಗದಲ್ಲಿ ಅದರಲ್ಲೂ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡು. 2016ರಲ್ಲಿ ರಿಲೀಸ್ ಆದ ನಾಗರಹಾವು ಚಿತ್ರವೇ ಕೊನೆ. ಆದರೆ ಆ ಚಿತ್ರವೂ ಕೂಡಾ ನಾಲ್ಕೈದು ವರ್ಷ ಬಾಕ್ಸಿನಲ್ಲೇ ಉಳಿದು ರಿಲೀಸ್ ಆಗಿದ್ದ ಸಿನಿಮಾ. ಅಧಿಕೃತವಾಗಿ 2014ರಲ್ಲಿ ಶಿವಣ್ಣ ಜೊತೆ ನಟಿಸಿದ್ದ ಆರ್ಯನ್ ಚಿತ್ರವನ್ನೇ ಲಾಸ್ಟ್ ಎನ್ನಬಹುದು. ಅದಾದ ಮೇಲೆ ರಮ್ಯಾ ರಾಜಕೀಯಕ್ಕೆ ಹೋಗಿ, ಮಂಡ್ಯ ಉಪಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಇತಿಹಾಸವನ್ನೇ ಬರೆದರು.
2014ರ ಎಲೆಕ್ಷನ್‍ನಲ್ಲಿ ಸೋತ ನಂತರ ರಾಷ್ಟ್ರ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ರಮ್ಯಾ ಹೆಚ್ಚೂ ಕಡಿಮೆ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಈಗ ವಾಪಸ್ ಬಂದಿದ್ದಾರೆ. ರಮ್ಯಾಗೀಗ 40 ವರ್ಷ. ನಾಯಕಿಯಾಗಿ ನಟಿಸಲು ಇರಬೇಕಾದ ಚಾರ್ಮ್ ಇವತ್ತಿಗೂ ಹಾಗೆಯೇ ಇದೆ ಹಾಗೂ ಅಭಿಮಾನಿಗಳ ಮಧ್ಯೆ ಕ್ರೇಜ್ ಕೂಡಾ ಇವಿತ್ತಿಗೂ ಹಾಗೆಯೇ ಇದೆ ಅನ್ನೋದು ರಮ್ಯಾ ಹೆಗ್ಗಳಿಕೆ.
ಹಾಗೆ ನೋಡಿದರೆ ದ್ವಿತ್ವ ಚಿತ್ರದಲ್ಲಿ ಪುನೀತ್ ಜೊತೆಯಲ್ಲಿ ನಟಿಸುವ ಮೂಲಕ ವಾಪಸ್ ಬರಬೇಕಿದ್ದ ರಮ್ಯಾ ಪುನೀತ್ ನಿಧನದೊಂದಿಗೆ ಮತ್ತೆ ರೀ-ಎಂಟ್ರಿಯನ್ನು ಮುಂದಕ್ಕೆ ಹಾಕಿಕೊಂಡಿದ್ದರು. ಈಗ ಬರುತ್ತಿದ್ದಾರೆ.. ನಾಯಕಿಯಾಗಿ ಅಲ್ಲ. ನಿರ್ಮಾಪಕಿಯಾಗಿ.
ಆಪಲ್ ಬಾಕ್ಸ್. ಇದು ರಮ್ಯಾ ಸ್ಥಾಪಿಸಿರೋ ಸಂಸ್ಥೆ. ಆಪಲ್ ಬಾಕ್ಸ್ ಅನ್ನೋದು ಸಾಮಾನ್ಯವಾಗಿ ನಟಿಯರು ಎತ್ತರ ಕಡಿಮೆ ಇದ್ದಾಗ ಬಳಸುವ ಟೂಲ್ ಕಿಟ್. ಈ ಸಂಸ್ಥೆಯ ಮೂಲಕ ಎರಡು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ ರಮ್ಯಾ. ಆ ಎರಡೂ ಚಿತ್ರಗಳಿಗೆ ಕೈಜೋಡಿಸಿರುವು ಕಾರ್ತಿಕ್ ಗೌಡ ಅವರ ಕೆ.ಆರ್.ಜಿ.ಸ್ಟುಡಿಯೋಸ್. ಇವರ ಜೊತೆಗೆ ವಿಜಯ್ ಕಿರಗಂದೂರು, ಯೋಗಿ ಬಿ.ರಾಜ್, ಜಯಣ್ಣ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ ರಮ್ಯಾ.
ರಮ್ಯಾ ಅವರ ಹೊಸ ಕನಸಿಗೆ ಹೊಸ ಹೆಜ್ಜೆಗೆ ಇಡೀ ಚಿತ್ರರಂಗ ಶುಭ ಕೋರಿದೆ. ಆದರೆ ಆ ಎರಡು ಚಿತ್ರಗಳು ಯಾವುವು? ನಿರ್ದೇಶಕರು ಯಾರು? ನಟನಟಿಯರು ಯಾರ್ ಯಾರು? ಎಲ್ಲವೂ ಸದ್ಯಕ್ಕೆ ಆಪಲ್ ಬಾಕ್ಸಿನಲ್ಲೇ ಸೀಕ್ರೆಟ್ ಆಗಿದೆ.