ಮೋಹನ್ ಲಾಲ್ ಮಲಯಾಳಂನವರಾದರೂ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಕಲಾವಿದ. ವಿಭಿನ್ನ ಪ್ರಯೋಗಗಳೇ ಇರಲಿ, ಕಮಷಿರ್ಯಲ್ ಚಿತ್ರಗಳೇ ಇರಲಿ.. ಮೋಹನ್ ಲಾಲ್ ನಟಿಸಿದ್ದಾರೆ ಎಂದರೆ ಅದಕ್ಕೆ ಒಂದು ಸ್ಪೆಷಲ್ ಟಚ್ ಕೊಟ್ಟಿರ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮೋಹನ್ ಲಾಲ್ ಒಂದು ಕಥೆಯನ್ನು ಓಕೆ ಮಾಡಿದ್ದಾರೆ ಎಂದರೇನೇ ಅದರಲ್ಲೊಂದು ವಿಶೇಷವಿರುತ್ತೆ. ಅಂತಾದ್ದರಲ್ಲಿ ಮೋಹನ್ ಲಾಲ್ ಕನ್ನಡದ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ಚಿತ್ರದಲ್ಲಿ ನಟಿಸೋಕೆ ಯೆಸ್ ಎಂದಿದ್ದಾರೆ.
ನಂದಕಿಶೋರ್ ನಿರ್ದೇಶಿಸುತ್ತಿರೋ ಮೋಹನ್ ಲಾಲ್ ನಟಿಸುತ್ತಿರೋ ಚಿತ್ರದ ಹೆಸರು ವೃಷಭ. ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾ ಇದು. ಅಭಿಷೇಕ್ ವ್ಯಾಸ್, ಪ್ರವೀಣ್ ಸಿಂಗ್ ಹಾಗೂ ಶ್ಯಾಂ ಸುಂದರ್ ಅವರ ಎವಿಎಸ್ ಸ್ಟುಡಿಯೋಸ್ ನಿರ್ಮಾಣದ ಮೊದಲ ಚಿತ್ರವಿದು.
ಮೋಹನ್ ಲಾಲ್ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ನಿಜ. ಅವರಿಗೆ ಚಿತ್ರದಲ್ಲಿ ವಿಶೇಷ ಶೇಡ್‍ಗಳಿರೋ ಪಾತ್ರವಿದೆ. ಇದು ಪಕ್ಕಾ ಔಟ್ & ಔಟ್ ಕಮರ್ಷಿಯಲ್ ಮೂವಿ. ಚಿತ್ರದ ಶೂಟಿಂಗ್ ಶುರುವಾಗುವುದು 2023ರಲ್ಲಿ ಎಂದಿದ್ದಾರೆ ನಂದಕಿಶೋರ್.
ಮೋಹನ್ ಲಾಲ್ ಅವರ ಜೊತೆ ತೆಲುಗಿನ ಇನ್ನೊಬ್ಬ ಸೂಪರ್ ಸ್ಟಾರ್ ಕೂಡಾ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಸದ್ಯಕ್ಕೆ ನಂದಕಿಶೋರ್ ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ ನಟನೆಯ ರಾಣಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸುದೀಪ್, ನಿಖಿಲ್ ಚಿತ್ರಗಳೂ ಕ್ಯೂನಲ್ಲಿವೆ. ಇವೆಲ್ಲವನ್ನೂ ಮುಗಿಸಿ ವೃಷಭ ಸ್ಟಾರ್ಟ್ ಮಾಡುತ್ತೇನೆ ಎಂದರೆ ಸಾಧ್ಯವಿಲ್ಲ. ಕೆಲವು ಪ್ರಾಜೆಕ್ಟ್ ಮುಂದೂಡಲೇಬೇಕು ನಂದಕಿಶೋರ್. ಏಕೆಂದರೆ ಯೆಸ್ ಎಂದಿರೋದು ಮೋಹನ್ ಲಾಲ್.