ಶಿವರಾಜಕುಮಾರ್ ಮತ್ತು ಗೀತಾ ದಂಪತಿ ಶಿವ 143 ಚಿತ್ರ ನೋಡಿ ಫಿದಾ ಆಗಿದ್ದಾರೆ. ರಾಜ್ಯಾದ್ಯಂತ ಯಶಶ್ವಿ ಪ್ರದರ್ಶನ ಕಾಣುತ್ತಿರೋ ಚಿತ್ರಕ್ಕೆ ಕೆಜಿ ರಸ್ತೆಯಲ್ಲಿರೋ ಸಂತೋಷ್ ಮುಖ್ಯ ಚಿತ್ರಮಂದಿರ. ಅಲ್ಲಿಯೇ ಶಿವ 143 ಚಿತ್ರವನ್ನು ಅಭಿಮಾನಿಗಳ ಜೊತೆ ವೀಕ್ಷಿಸಿದರು ಶಿವಣ್ಣ ಮತ್ತು ಗೀತಾ.
ಚಿತ್ರದಲ್ಲಿ ಹೀರೋನನ್ನು ದಾರಿ ತಪ್ಪಿದ ಮಗ ಎಂಬಂತೆ ತೋರಿಸಲಾಗಿದೆ. ಅಂದಹಾಗೆ ಚಿತ್ರಕ್ಕೆ ಮೊದಲು ಇಟ್ಟಿದ್ದ ಟೈಟಲ್ಲೇ ಅದು. ದಾರಿ ತಪ್ಪಿದ ಮಗ. ಅಲ್ಲದೆ ನಾಯಕಿಯ ಪಾತ್ರದ ಹೆಸರು ಮಧು. ಅದು ಓಂ ಚಿತ್ರದ ನಾಯಕಿಯ ಹೆಸರು. ಆ ಎರಡನ್ನೂ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಪ್ಪಾಜಿಯವರ ದಾರಿ ತಪ್ಪಿದ ಮಗನಿಂದ ಶುರುವಾಗಿ ಓಂವರೆಗೆ ಲಿಂಕ್ ಮಾಡಿರುವುದು ಚೆನ್ನಾಗಿದೆ ಎಂದಿದ್ದಾರೆ ಶಿವಣ್ಣ.
ಧಿರೇನ್ ಜ್ಯೂನಿಯರ್ ಶಿವಣ್ಣ ಆಗೋದು ಬೇಡ. ಅವನೂ ಸಿನಿಮಾದಲ್ಲಿ ಯಾರನ್ನೂ ಇಮಿಟೇಟ್ ಮಾಡಿಲ್ಲ. ಚೆನ್ನಾಗಿ ನಟಿಸಿದ್ದಾನೆ. ಅವನು ಧಿರೇನ್ ಆಗಿಯೇ ಜನಪ್ರಿಯನಾಗಲಿ ಎಂದು ಹಾರೈಸಿದ್ದಾರೆ ಶಿವಣ್ಣ. ಕ್ಲೈಮಾಕ್ಸ್‍ನಲ್ಲಿ ಒಂದೊಳ್ಳೆ ಸಂದೇಶವೂ ಇದೆ. ಅದು ಇಷ್ಟವಾಯಿತು ಎಂದಿದ್ದಾರೆ ಶಿವಣ್ಣ.