ನಟ ಹರೀಶ್ ರೈ ಅವರಿಗೆ ಗಂಟಲು ಕ್ಯಾನ್ಸರ್. ಚಿಕಿತ್ಸೆಯೂ ನಡೆಯುತ್ತಿದೆ. ಇದೆಲ್ಲವೂ ಅವರಿಗೆ ಶುರುವಾದ ಹೊತ್ತಿನಲ್ಲಿ ಹರೀಶ್ ರೈ ಕೆಜಿಎಫ್ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ರಾಕಿ ಭಾಯ್ ಚಾಚಾ ಪಾತ್ರದಲ್ಲಿ ನಟಿಸಿದ್ದ ಅವರಿಗೆ ಅದು ದೊಡ್ಡ ಹೆಸರನ್ನೂ ಕೊಟ್ಟಿದ್ದು ನಿಜ. ಆದರೆ ವಿಧಿಯಾಟ ಬೇರೆಯೇ ಇತ್ತು.
ನನಗೆ ಕೆಜಿಎಫ್ ಮಾಡುವಾಗಲೇ ಈ ಸಮಸ್ಯೆ ಗೊತ್ತಾಗಿತ್ತು. ಚಿತ್ರರಂಗದವರ ಮೇಲೂ ನಂಬಿಕೆಯಿತ್ತು. ಕೆಜಿಎಫ್ ಮೇಲೂ ನಂಬಿಕೆಯಿತ್ತು. ಈ ಚಿತ್ರ ಮುಗಿದ ಮೇಲೆ ನನಗೆ ಒಳ್ಳೆ ಆಫರ್ ಬರುತ್ತವೆ. ಆ ಹಣದಲ್ಲೇ ಆಪರೇಷನ್ ಮಾಡಿಸಿಕೊಳ್ಳೋಣ ಎಂದುಕೊಂಡಿದ್ದೆ. ಅಕಸ್ಮಾತ್ ಅದಕ್ಕೂ ಮೊದಲೇ ಸತ್ತರೆ ನನ್ನ ಕುಟುಂಬಕ್ಕೆ ಚಿತ್ರರಂಗದವರೇ ರಕ್ಷಣೆಗೆ ಬರುತ್ತಾರೆ ಅನ್ನೋ ನಂಬಿಕೆಯೂ ಇತ್ತು. ಅದಕ್ಕಾಗಿಯೇ ವಿಡಿಯೋ ಮಾಡಿಟ್ಟಿದ್ದೆ... ಹೀಗೆ ಹೇಳುತ್ತಾ ಹೋಗುತ್ತಾರೆ ಹರೀಶ್ ರೈ.
ಇಷ್ಟೆಲ್ಲ ಆಗಿ ಹರೀಶ್ ರೈ ಅವರ ಚಿಕಿತ್ಸೆ ಮತ್ತು ಸಂಕಷ್ಟ ಮೀಡಿಯಾದಲ್ಲಿ ಬಂದ ಕೂಡಲೇ ಚಿತ್ರರಂಗದವರು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾರೆ. ಸ್ಟಾರ್ ನಟರೊಬ್ಬರು ಫೋನ್ ಮಾಡಿದ್ದರು. ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತೋ ಅದು ನನ್ನದು. ಹಣಕ್ಕೆ, ಖರ್ಚಿಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ನನ್ನ ಹೆಸರನ್ನೂ ಎಲ್ಲಿಯೂ ಹೇಳಬೇಡಿ ಎಂದಿದ್ದಾರಂತೆ. ಹೀಗಾಗಿ ನಾನು ಹೆಸರು ಹೇಳೋ ಹಾಗಿಲ್ಲ ಎಂದು ದೇವರಿಗೆ ಕೈ ಮುಗಿಯುತ್ತಾರೆ ಹರೀಶ್ ರೈ.
ನನ್ನ ಕಷ್ಟಕ್ಕೆ ಮರುಗುವವರನ್ನು ನಾನು ಸಂಪಾದಿಸಿದ್ದೇನೆ. ಅದೇ ನನಗೆ ಖುಷಿ ಎಂದಿದ್ದಾರೆ ಹರೀಶ್ ರೈ.
Also Read -