ಲಕ್ಕಿಮ್ಯಾನ್. ಸೆಪ್ಟೆಂಬರ್`ನಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ ಇದು. ನಾನ್ ಕಡುವುಳೆ ಚಿತ್ರದ ರೀಮೇಕ್ ಆಗಿರೋ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭುದೇವ ಕೂಡಾ ನಟಿಸಿರೋ ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶಕ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬಾರೋ ರಾಜ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಿಚ್ಚ ಸುದೀಪ್, ರಾಘವೇಂದ್ರ ರಾಜಕುಮಾರ್, ಸಾಧುಕೋಕಿಲ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.
ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ನಟಿಸುವುದು ನನಗೆ ಹೊಸದಲ್ಲ. ಈ ಹಿಂದೆ ಅಭಿನಯಿಸಿದ್ದೇನೆ. ಆದರೆ ನಾನು ಲೀಡ್ ರೋಲಿನಲ್ಲಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸಿದ್ದಾರೆ ಎನ್ನುವುದು ನನ್ನ ಹೆಮ್ಮೆ ಎಂದರು ಕೃಷ್ಣ.
ಈ ಚಿತ್ರವನ್ನು ಬಾಚಿ ತಬ್ಬಿಕೊಂಡು ಬಿಡಿ. ಅಪ್ಪುನ ಮತ್ತೆ ನೋಡಬಹುದು ಅನ್ನೋ ಕಾರಣಕ್ಕೆ ನಾನು ಟ್ರೇಲರ್ ನೋಡಿ ಖುಷಿಪಟ್ಟೆ. ಅಪ್ಪು ಅವರು ಈಗಿಲ್ಲ. ಅವರು ದೇವರಾಗಿದ್ದಾರೆ. ಈ ಸಿನಿಮಾದಲ್ಲೂ ದೇವರಾಗಿ ನಟಿಸಿದ್ದಾರೆ. ಮತ್ತೆ ಬೇಕು ಅಂದ್ರೂ ಅಪ್ಪು ನೋಡೋಕೆ ಸಿಗಲ್ಲ. ಅಪ್ಪುಗೆ ದೇವರ ಪಾತ್ರ ಚೆನ್ನಾಗಿ ಸೂಟ್ ಆಗುತ್ತೆ ಎಂದವರು ಸುದೀಪ್.
ಚಿತ್ರದ ನಿರ್ದೇಶಕ ನಾಗೇಂದ್ರ ಪ್ರಸಾದ್ ಎಲ್ಲವನ್ನೂ ನಡೆಸಿಕೊಟ್ಟ ಅಣ್ಣ ಪ್ರಭುದೇವಗೆ ಥ್ಯಾಂಕ್ಸ್ ಹೇಳಿದರು. ಪ್ರಭುದೇವ ಫೋನಿನಲ್ಲಿ ಕೇಳಿದ ತಕ್ಷಣ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅಪ್ಪು.
ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಅತಿಥಿ ನಟರಾಗಿದ್ದರೂ ಅವರ ಪಾತ್ರ ಮುಕ್ಕಾಲು ಗಂಟೆ ಇರಲಿದೆಯಂತೆ.
ಲಕ್ಕಿಮ್ಯಾನ್ ಒಂದು ರೀತಿಯಲ್ಲಿ ಅಪ್ಪು ನಟನೆಯ ಕಟ್ಟಕಡೆಯ ಸಿನಿಮಾ. ಇದಾದ ನಂತರ ಗಂಧದ ಗುಡಿ ಬರಲಿದೆಯಾದರೂ ಅದು ಸಾಕ್ಷ್ಯಚಿತ್ರ. ಸಿನಿಮಾ ಅಲ್ಲ.