` ಶ್ರೀದೇವಿ, ಪ್ರಿಯಾಂಕಾ ಚೋಪ್ರಾ ಚಿತ್ರಗಳನ್ನು ನೋಡಿ ಸಿದ್ಧಳಾದೆ : ಲವ್ 360 ರಚನಾ ಇಂದರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಶ್ರೀದೇವಿ, ಪ್ರಿಯಾಂಕಾ ಚೋಪ್ರಾ ಚಿತ್ರಗಳನ್ನು ನೋಡಿ ಸಿದ್ಧಳಾದೆ : ಲವ್ 360 ರಚನಾ ಇಂದರ್
Rachana Indar Image

ಶ್ರೀದೇವಿ-ಕಮಲ್ ಹಾಸನ್ ಅಭಿನಯದ ಸದ್ಮಾ ಭಾರತೀಯ ಚಿತ್ರಜಗತ್ತಿನ ಕ್ಲಾಸಿಕ್`ಗಳಲ್ಲೊಂದು. ಕೆಲವು ವರ್ಷಗಳ ಹಿಂದೆ ಬಂದಿದ್ದ ಪ್ರಿಯಾಂಕಾ ಚೋಪ್ರಾ-ರಣ್‍ಬೀರ್ ಕಪೂರ್ ಅಭಿನಯದ ಬರ್ಫಿ ಕೂಡಾ ಅಷ್ಟೆ.. ಎರಡೂ ಚಿತ್ರಗಳ ಕಥೆಯಲ್ಲಿದ್ದ ಸಾಮ್ಯತೆಯೆಂದರೆ.. ನಾಯಕಿ ಮಾನಸಿಕ ಅಸ್ವಸ್ಥೆ. ಮಾನಸಿಕ ಅಸ್ವಸ್ಥೆಯ ಒಳಗೂ ಒಂದು ಪ್ರೀತಿಸುವ ಹೃದಯವಿದೆ. ಆದರೆ.. ಅದು ಪ್ರೀತಿ ಎಂದು ಆಕೆಗೆ ಗೊತ್ತಿರಲ್ಲ. ಈಗ ಅಂತಾದ್ದೊಂದು ಸವಾಲಿನ ಪಾತ್ರ ಮಾಡಿ ಗೆದ್ದಿರುವುದು ರಚನಾ ಇಂದರ್.

ಲವ್ 360 ಚಿತ್ರದಲ್ಲಿ ರಚನಾ ಇಂದರ್ ಅವರದ್ದು ಮಾನಸಿಕ ಅಸ್ವಸ್ಥೆಯ ಪಾತ್ರ. ಹೀರೋ ಅವಳ ರಕ್ಷಣೆಗೆ ಸದಾ ನಿಂತಿರುತ್ತಾನೆ. ಅವಳು ಮಾನಸಿಕವಾಗಿ ಬೆಳವಣಿಗೆಯಿಲ್ಲದ ಹುಡುಗಿಯೇ ಹೊರತು, ಹುಚ್ಚಿಯಲ್ಲ. ಆದರೆ, ಸಮಾಜ ಆಕೆಗೆ ಹುಚ್ಚಿಯ ಪಟ್ಟ ಕಟ್ಟಿರುತ್ತೆ. ಇಡೀ ಕಥೆ ಆಕೆ ಮತ್ತು ಆತನ ಸುತ್ತ ಸುತ್ತುತ್ತಾ ಇರುತ್ತೆ..

ಶಶಾಂಕ್ ಸರ್ ತಮ್ಮ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ.. ಅಷ್ಟೇ ಪ್ರೀತಿಯಿಂದ ನಾಯಕಿಯ ಪಾತ್ರವನ್ನೂ ಚಿತ್ರಿಸುತ್ತಾರೆ. ಶಶಾಂಕ್ ಸರ್ ಈ ಕಥೆ ಹೇಳಿದಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡೆ. ಶಶಾಂಕ್ ಸರ್ ಅವರೇ ನನಗೆ ಸದ್ಮಾ ಮತ್ತು ಬರ್ಫಿ ಚಿತ್ರಗಳನ್ನು ನೋಡುವಂತೆ ತಿಳಿಸಿದರು. ಇಂತಹ ಪಾತ್ರಗಳಲ್ಲಿ  ಬೇರೆ ಬೇರೆ ಕಲಾವಿದರು ಯಾವ್ಯಾವ ರೀತಿ ಅಭಿನಯಿಸಿದ್ದಾರೆ ನೋಡಿಕೊಳ್ಳಿ ಎಂದರು. ನಂತರ ವರ್ಕ್‍ಶಾಪ್ ಕೂಡಾ ಆಯಿತು. ಅದಾದ ನಂತರ ಪಾತ್ರದೊಳಗೆ ಇಳಿದುಬಿಟ್ಟೆ ಎನ್ನುತ್ತಾರೆ ರಚನಾ ಇಂದರ್.

ರಚನಾ ಇಂದರ್ ಮೊದಲು ಫೇಮಸ್ ಆಗಿದ್ದು ಲವ್ ಮಾಕ್ಟೇಲ್ ಚಿತ್ರದ ಹೆಂಗೆ ನಾವು ಪಾತ್ರದಿಂದ. ಆ ಕ್ಯಾರೆಕ್ಟರ್ ಅದೆಷ್ಟು ಫೇಮಸ್ ಎಂದರೆ ಈಗಲೂ ನನಗೆ ಬರುವ ಬಹುತೇಕ ಆಫರ್‍ಗಳಲ್ಲಿ ಅದೇ ರೀತಿಯ ಬಬ್ಲಿ ಬಬ್ಲಿ ಸ್ಟೈಲ್ ಇರುತ್ತೆ. ಹೀಗಾಗಿಯೇ ಎಲ್ಲವನ್ನೂ ಒಪ್ಪಿಕೊಳ್ತಿಲ್ಲ. ಇದರ ಮಧ್ಯೆ ನನಗೆ ಹರಿಕಥೆ ಅಲ್ಲ ಗಿರಿಕಥೆಯಲ್ಲಿ ಬೇರೆಯದೇ ಶೈಲಿಯ ಕ್ಯಾರೆಕ್ಟರ್ ಸಿಗ್ತು. ಈಗ ಲವ್ 360ಯಲ್ಲಿ ಚಾಲೆಂಜಿಂಗ್ ಪಾತ್ರವೇ ಸಿಕ್ಕಿದೆ. ಖಂಡಿತಾ ಪ್ರೇಕ್ಷಕರು ನನ್ನ ಈ ಪಾತ್ರವನ್ನು ಮೆಚ್ಚಿಕೊಳ್ತಾರೆ ಅನ್ನೋದು ರಚನಾ ಇಂದರ್ ಕಾನ್ಫಿಡೆನ್ಸ್.

ಶಶಾಂಕ್ ನಿರ್ದೇಶಿಸಿ ನಿರ್ಮಾಣದಲ್ಲೂ ತೊಡಗಿಸಿಕೊಂಡಿರೋ ಚಿತ್ರ ಲವ್ 360. ಈಗಾಗಲೇ ಜಗವೇ ನೀನು ಹಾಡು ಪ್ರೇಮಿಗಳ ಹೃದಯದಲ್ಲಿ ಲಬ್ ಡಬ್ ಲಬ್ ಡಬ್ ಮಾಡುತ್ತಿದೆ. ರಚನಾ ಇಂದರ್ ಎದುರು ಹೀರೋ ಆಗಿರೋ ಪ್ರವೀಣ್ ಕೂಡಾ ಹೊಸಬರೇ. ಹೊಸಬರನ್ನು ಇಟ್ಟುಕೊಂಡು ಚೆಂದದ ಪ್ರೇಮಕಥೆ ಹೇಳೋದ್ರಲ್ಲಿ ಶಶಾಂಕ್ ಎತ್ತಿದ ಕೈ. ಪ್ರೇಕ್ಷಕರ ನಿರೀಕ್ಷೆಯನ್ನು ಶಶಾಂಕ್ ಯಾವತ್ತೂ ಸುಳ್ಳು ಮಾಡಿಲ್ಲ ಎನ್ನುವುದು ವಿಶೇಷ.