ಪ್ರಶಾಂತ್ ನೀಲ್ ಈಗ ನ್ಯಾಷನಲ್ ಐಕಾನ್`ಗಳಲ್ಲಿ ಒಬ್ಬರು. ಕೆಜಿಎಫ್ 1 & 2 ನಂತರ ಪ್ರಶಾಂತ್ ನೀಲ್ ಹೆಸರು ಕೇಳದವರೇ ಇಲ್ಲ ಎನ್ನಬಹುದು. ಕೆರಿಯರ್ ಶುರು ಮಾಡಿದ್ದು 2014ರಲ್ಲಿ. ಇದುವರೆಗೆ ತೆರೆಗೆ ಬಂದಿರೋದು ಕೆಜಿಎಫ್ 1, ಕೆಜಿಎಫ್ 2 ಮತ್ತು ಉಗ್ರಂ ಮಾತ್ರ. ಸಲಾರ್ ಇನ್ನೂ ಚಿತ್ರೀಕರಣದ ಹಂತದಲ್ಲೇ ಇದೆ. ಅದು ರಿಲೀಸ್ ಆಗುವುದು ಮುಂದಿನ ವರ್ಷಕ್ಕೆ. ಹಾಗಂತ ಪ್ರಶಾಂತ್ ನೀಲ್ ಬಡವರೇನಲ್ಲ.
ನಿರ್ದೇಶಿಸಿದ ಮೂರು ಚಿತ್ರಗಳೇ ನೀಲ್ ಅವರಿಗೆ ಕೈತುಂಬಾ ಹಣ ಕೊಟ್ಟಿವೆ. ಆದರೆ.. ಹಣ ಮಾಡುವುದು ದೊಡ್ಡದಲ್ಲ. ಅದನ್ನು ಒಳ್ಳೆಯ ಕೆಲಸಗಳಿಗೆ ಬಳಸುವುದೂ ಅಷ್ಟೇ ಮುಖ್ಯ ಅಲ್ಲವೇ. ಪ್ರಶಾಂತ್ ನೀಲ್ ಅದನ್ನೇ ಮಾಡಿದ್ದಾರೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನೀಲಕಂಠಪುರ ಪ್ರಶಾಂತ್ ನೀಲ್ ಅವರ ಹುಟ್ಟೂರು. ಪ್ರಶಾಂತ್ ನೀಲ್ ಹೆಸರಲ್ಲಿರುವ ನೀಲ್ ಪದದ ಅರ್ಥವೇ ಅದು. ನೀಲಕಂಠಪುರಂನ ಶಾರ್ಟ್ ಫಾರ್ಮ್. ಅಂತಹ ಊರಿನ ಆಸ್ಪತ್ರೆಗೆ ನೀಲ್ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ತಮ್ಮ ತಂದೆ ಸುಭಾಷ್ ಅವರ ಹೆಸರಿನಲ್ಲಿ ಆಸ್ಪತ್ರೆಗೆ ದೇಣಿಗೆ ಕೊಟ್ಟಿದ್ದಾರೆ.
ಈ ಸುದ್ದಿಯನ್ನು ಪ್ರಶಾಂತ್ ನೀಲ್ ಅವರ ಚಿಕ್ಕಪ್ಪ ಹಾಗೂ ಆಂಧ್ರಪ್ರದೇಶ ಕಾಂಗ್ರೆಸ್`ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಾ.ಎನ್.ರಘುವೀರ ರೆಡ್ಡಿ ಹಂಚಿಕೊಂಡಿದ್ದಾರೆ. ನೀಲಕಂಠಪುರಂನಲ್ಲಿ ಎಸ್.ವಿ.ಪ್ರಸಾದ್ ಕಣ್ಣಿನ ಆಸ್ಪತ್ರೆಗೆ ನನ್ನ ಅಣ್ಣನ ಮಗ 50 ಲಕ್ಷ ರೂ. ದೇಣಿಗೆ ನೀಡಿದ್ದಾನೆ. ನನ್ನ ಅಣ್ಣನೂ ಆಗಿರುವ ಪ್ರಶಾಂ ಅವರ ತಂದೆ ಸುಭಾಷ್ ಅಮೃತ ಮಹೋತ್ಸವದ ನೆನಪಲ್ಲಿ 50 ಲಕ್ಷ ರೂ. ನೀಡಿದ್ದಾನೆ. ಇದು ನನಗೆ ಹೆಮ್ಮೆ ಹಾಗೂ ನೀಲಕಂಠಪುರ ಗ್ರಾಮಸ್ಥರಿಗೆ ಹೆಮ್ಮೆಯ ವಿಷಯ ಎಂದಿದ್ದಾರೆ ರಘುವೀರ ರೆಡ್ಡಿ.