ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕಾಗಿ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಮಿಲೇ ಸುರ್ ಮೇರಾ ತುಮ್ಹಾರಾ.. ಹಾಡನ್ನು ಸ್ಫೂರ್ತಿಯಾಗಿಟ್ಟುಕೊಡು ವಂದೇಮಾತರಂ ಗೀತೆ ನಿರ್ಮಾಣ ಮಾಡಿದ್ದರು.ಎಸ್.ಎಲ್.ಭೈರಪ್ಪ, ಸಾಲುಮರದ ತಿಮ್ಮಕ್ಕ, ವೆಂಕಟೇಶ್ ಪ್ರಸಾದ್, ಜೋಗತಿ ಮಂಜಮ್ಮ ಅವರಂತಹ ಸಾಧಕರು.. ಕಿಚ್ಚ ಸುದೀಪ್, ಶಿವಣ್ಣ, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಧೃವ ಸರ್ಜಾ, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ರಿಷಬ್ ಶೆಟ್ಟಿ, ಧನಂಜಯ, ಅನಂತನಾಗ್.. ಹೀಗೆ ಚಿತ್ರರಂಗದ ಕಲಾವಿದರು.. ಒಟ್ಟಿಗೇ ಸೇರಿ ಹಾಡಿರುವ ಹಾಡು.. ವಂದೇಮಾತರಂ.
ಈ ಹಾಡನ್ನು ಮುಖ್ಯಮಂತ್ರಿ, ರಾಜ್ಯ ಸಚಿವರು ಸೇರಿದಂತೆ ಹಲವರು ಮೆಚ್ಚಿಕೊಂಡಿದ್ದರು. ರಾಷ್ಟ್ರೀಯ ಗೀತೆಗೆ ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜಸಿದ್ದರೆ, ಅದ್ಭುತ ಧ್ವನಿ ನೀಡಿದ್ದವರು ವಿಜಯ್ ಪ್ರಕಾಶ್. ಈ ಹಾಡನ್ನು ನಿರ್ದೇಶನ ಮಾಡಿದ್ದವರು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್.
ಇಂತಾದ್ದೊಂದು ಹಾಡು ಮಾಡೋಣ ಎಂದು ಗೆಳೆಯ ಶ್ರೀನಿಧಿ ಹೇಳಿದರು. ಎಲ್ಲರನ್ನೂ ಫೋನ್ ಮೂಲಕವೇ ಸಂಪರ್ಕಿಸಿದೆ. ಮಿಲ್ ಸುರ್ ಮೇರಾ ತುಮ್ಹಾರಾ ಹಾಡು ನನಗೆ ಚಿಕ್ಕಂದಿನಿಂದಲೂ ಇಷ್ಟ. ಇಂತಹ ಹಾಡನ್ನು ಕನ್ನಡದಲ್ಲಿ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ ಎಂದಿದ್ದ ಜಗ್ಗೇಶ್ ಅವರಿಗೆ ಈ ಹಾಡನ್ನು ಖುದ್ದು ಮೋದಿಯವರಿಗೆ ತೋರಿಸುವ ಅಭಿಲಾಷೆಯಿತ್ತು.
ಈ ಹಾಡಿನ ಬಗ್ಗೆ ಖುದ್ದು ಮೋದಿ ಟ್ವೀಟ್ ಮಾಡಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನ ಎಂದು ಹಾಡನ್ನು ರೀಟ್ವೀಟ್ ಮಾಡಿದ್ದಾರೆ ಮೋದಿ. ಅದನ್ನು ಕನ್ನಡದಲ್ಲಿಯೇ ಟ್ವೀಟ್ ಮಾಡಿರುವುದು ಜಗ್ಗೇಶ್ ಅವರ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.