ನಾನು ಕೆಜಿಎಫ್ ಚಾಪ್ಟರ್ 2 ಬಗ್ಗೆ ಮಾತನಾಡುವಾಗ ಏನ್ ಗುರೂ ಇವ್ನು ಬೇಜಾನ್ ಬಿಲ್ಡಪ್ ಕೊಡ್ತಾವ್ನೆ ಅಂತಿದ್ರು. ಪ್ಯಾನ್ ಇಂಡಿಯಾ ಮಾರ್ಕೆಟ್‍ಗೆ ತೆಗೆದುಕೊಂಡು ಹೋಗ್ತೀವಿ ಅನ್ನೋವಾಗ ನಕ್ಕವರ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಅದರ ಮಧ್ಯೆ ಕೆಲವೊಂದಿಷ್ಟು ಜನ ನಂಬಿಕೆಯಿಟ್ಟರು. ಜೊತೆಗೆ ನಿಂತರು. ಈಗ ಇಡೀ ಇಂಡಿಯಾ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡುತ್ತಿದೆ. ನನಗೆ ಮತ್ತು ನನ್ನನ್ನು ನಂಬಿದವರಿಗೆ ಆತ್ಮವಿಶ್ವಾಸವಿತ್ತು. ಕೆಜಿಎಫ್ ನನ್ನೊಬ್ಬನಿಂದ ಆಗಿದ್ದೂ ಅಲ್ಲ. ಆದರೆ.. ಅದರ ಜೊತೆಗಿದ್ದ ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸವಿತ್ತು. ಅದು ಇವತ್ತು ನಮ್ಮನ್ನು ಇಲ್ಲಿಗೆ ತಂದು ಇಲ್ಲಿಗೆ ನಿಲ್ಲಿಸಿದೆ..
ಮೈಸೂರಿನಲ್ಲಿ ಮೈಸೂರು ವಿವಿ ವತಿಯಿಂದ ನಡೆದ ಯುವಜನೋತ್ಸವದಲ್ಲಿ ಮುಖ್ಯ ಅತಿಥಿಯಾಗಿದ್ದ ಯಶ್ ಆತ್ಮವಿಶ್ವಾಸದ ಬಗ್ಗೆ ಮಾತನಾಡುತ್ತಿದ್ದರೆ.. ಇಡೀ ಸಭೆಯಲ್ಲಿ ಕರತಾಡನ. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ನಾನು ಅಪ್ಪ ಅಮ್ಮ ಹೆಮ್ಮೆ ಪಡುವಂತ ಮಗನೇನೂ ಆಗಿರಲಿಲ್ಲ. ಆದರೆ.. ಒಂದು ಬದಲಾವಣೆ ಸಂಭವಿಸಿದಾಗ ಬದುಕೂ ಬದಲಾಗುತ್ತೆ. ಯಾವ ಊರಿನಲ್ಲಿ ನಾನು ಬೀದಿ ಬೀದಿ ಸುತ್ತಿದ್ದೆನೋ.. ಅದೇ ಊರಿನಲ್ಲಿ ನನಗೆ ಇಷ್ಟು ಅಭಿಮಾನಿಗಳಿದ್ದಾರೆ. ಇದು ಹೆಮ್ಮೆ ಎನಿಸುತ್ತದೆ ಎಂದರು ಯಶ್.
ಸಿಎಂ ಬೊಮ್ಮಾಯಿ ಯಶ್ ಅವರನ್ನು ಇಂಡಿಯಾದ ರಾಕಿಂಗ್ ಸ್ಟಾರ್ ಎಂದು ಕರೆದರೆ, ಸಂಸದ ಪ್ರತಾಪ್ ಸಿಂಹ, ಸಚಿವ ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವು ನಾಯಕರು ಯಶ್ ಜೊತೆ ಸೆಲ್ಫಿ ತೆಗೆಸಿಕೊಂಡರು. ವಿದ್ಯಾರ್ಥಿನಿಯರು ಯಶ್`ಗೆ ಹೂಮುತ್ತು ಹಾರಿಸಿದರೆ.. ವಿದ್ಯಾರ್ಥಿಗಳ ರಾಕಿ..ರಾಕಿ.. ಘೋಷಣೆ ಇಡೀ ಸಭೆಯನ್ನು ಕಿವಿಗಡಚಿಕ್ಕುವಂತೆ ಮಾಡಿತ್ತು.