ಕೋಟಿ ಕೋಟಿ ಸಿಗುತ್ತೆ ಎಂದ ಕೂಡಲೇ ಅದು ಎಂತಹ ಜಾಹೀರಾತೇ ಆಗಲಿ.. ಸೈ ಎನ್ನುವ ನಟರಿಗೇನೂ ಕಡಿಮೆ ಇಲ್ಲ. ಆದರೆ ಕೆಲವರಿರುತ್ತಾರೆ. ಅವರು ಹಣವನ್ನೂ ಮೀರಿ ಕೆಲವು ನಿಯಮಗಳಿಗೆ ಬದ್ಧರಾಗಿರುತ್ತಾರೆ. ನೀವು ಜಾಹೀರಾತುಗಳಲ್ಲಿ ಸರೋಗೇಟ್ ಜಾಹೀರಾತು ನೋಡಿಯೇ ಇರುತ್ತೀರಿ. ಸಿಗರೇಟ್, ಮದ್ಯಗಳನ್ನು ಅಡ್ವರ್ಟೈಸ್ ಮಾಡುವಂತಿಲ್ಲ. ಆದರೆ.. ಅವುಗಳ ಹೆಸರನ್ನು ಓಪನರ್, ಕೂಲ್ ಡ್ರಿಂಕ್ಸ್, ಮೌತ್ ವಾಷ್.. ಹೀಗೆ ಯಾವ್ಯಾವುದೋ ಪ್ರಾಡಕ್ಟ್‍ಗಳಿಗೆ ಇಟ್ಟು ಜಾಹೀರಾತು ಮಾಡುತ್ತಾರೆ. ಅಂತಹವುಗಳಿಂದ ದೂರ ಉಳಿದಿರುವುದು ಕೆಲವೇ ಕೆಲವು ಸ್ಟಾರ್ಸ್.
ಸಚಿನ್ ತೆಂಡೂಲ್ಕರ್ ಮದ್ಯಪಾನ ಮತ್ತು ಧೂಮಪಾನ ಪ್ರಚೋದಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲ್ಲ. ವಿರಾಟ್ ಕೊಹ್ಲಿ ಇನ್ನೂ ಒಂದು ಹೆಜ್ಜೆ ಮುಂದೆ. ಕೂಲ್‍ಡ್ರಿಂಕ್ಸ್ ಜಾಹೀರಾತಿಗೇ ನೋ ಎಂದಿದ್ದವರು. ರಜನಿಕಾಂತ್ ಜಾಹೀರಾತಿನಲ್ಲೇ ನಟಿಸಲ್ಲ. ಡಾ.ರಾಜ್, ಅಪ್ಪು ಮೊದಲಾದವರು ಜನೋಪಯೋಗಿ ಜಾಹೀರಾತುಗಳಲ್ಲಿ ಉಚಿತವಾಗಿ ನಟಿಸಿದವರು. ಆ ಹಾದಿಗೀಗ ಅಲ್ಲು ಅರ್ಜುನ್ ಸೇರುತ್ತಿದ್ದಾರೆ.
ಕಣಕಣದಲ್ಲೂ ಕೇಸರಿ ಎಂಬ ಜಾಹೀರಾತು ನೋಡಿಯೇ ಇರುತ್ತೀರಿ. ಅದರಲ್ಲಿ ಆರಂಭದಲ್ಲಿ ಕಾಣಿಸಿಕೊಂಡವರು ಅಜಯ್ ದೇವಗನ್. ಸ್ವಲ್ಪ ದಿನ ಕಳೆದಂತೆ ಅಜಯ್ ದೇವಗನ್ ಜೊತೆಗೆ ಶಾರೂಕ್ ಕೂಡಾ ಕಾಣಿಸಿಕೊಂಡರು. ಮತ್ತೂ ಕೆಲದಿನಗಳ ನಂತರ ಆ ಲಿಸ್ಟಿನಲ್ಲಿ ಅಕ್ಷಯ್ ಕುಮಾರ್ ಕೂಡಾ ಸೇರಿಬಿಟ್ಟರು. ಆಗ ರೊಚ್ಚಿಗೆದ್ದರು ಫ್ಯಾನ್ಸ್. ಅಕ್ಷಯ್ ಕುಮಾರ್ ಸ್ವಚ್ಛ ಭಾರತ್ ಅಭಿಯಾನವನ್ನು ಬೆಂಬಲಿಸಿದ್ದವರು. ದೇಶಪ್ರೇಮದ ಕಥಾ ಹಂದರ ಹಾಗೂ ಸಾಮಾಜಿಕ ಕಳಕಳಿಯ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ನಟಿಸಿದ್ದವರು. ಅಕ್ಷಯ್ ವಿರುದ್ಧ ಅಭಿಯಾನವೇ ಶುರುವಾಯ್ತು. ಕೊನೆಗೆ ಈಗ ಪಡೆದಿರುವ ಹಣವನ್ನು ಸಮಾಜಸೇವೆಗೆ ಬಳಸುತ್ತೇನೆ ಹಾಗೂ ಮುಂದೆಂದೂ ಗುಟ್ಕಾ ಜಾಹೀರಾತಿನಲ್ಲಿ ನಟಿಸಲ್ಲ ಎಂದು ಸ್ಪಷ್ಟನೆ ಕೊಟ್ಟರು ಅಕ್ಷಯ್ ಕುಮಾರ್.
ವಿಚಿತ್ರವೆಂದರೆ ಇಂತಹುದೇ ಗುಟ್ಕಾ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ರಣ್ವೀರ್ ಸಿಂಗ್ ಸೇರಿದಂತೆ ಇನ್ನೂ ಹಲವು ತಾರೆಯರು ನಟಿಸಿದ್ದಾರೆ. ಆದರೆ.. ಮೊದಲ ಆಕ್ರೋಶ ವ್ಯಕ್ತವಾಗಿದ್ದು ಮಾತ್ರ ಅಕ್ಷಯ್ ಕುಮಾರ್ ಅವರಿಗೇ..
ಅದಾದ ನಂತರ ಕೆಜಿಎಫ್ ಸ್ಟಾರ್ ಯಶ್ ಅವರಿಗೂ ಅಂತಹುದೇ ಒಂದು ಗುಟ್ಕಾ ಕಂಪೆನಿಯ ಜಾಹೀರಾತಿನ ಆಫರ್ ಹೋಯ್ತು. ವಿಶೇಷವೆಂದರೆ ಯಶ್ ಆ ಜಾಹೀರಾತನ್ನು ಕೋಟಿ ಕೋಟಿ ಕೊಟ್ಟರೂ ಬೇಡ ಎಂದು ತಿರಸ್ಕರಿಸಿಬಿಟ್ಟರು. ಈಗ ಅಲ್ಲು ಅರ್ಜುನ್ ಸರದಿ. ಗುಟ್ಕಾ ಕಂಪೆನಿಯೊಂದು ಅಲ್ಲು ಅರ್ಜುನ್ ಅವರಿಗೆ 10 ಕೋಟಿಯ ಆಫರ್ ಕೊಟ್ಟಿತ್ತಂತೆ. ಆದರೆ ಅದನ್ನು ಬೇಡ ಎಂದಿದ್ದಾರೆ ಅಲ್ಲು ಅರ್ಜುನ್.