ಆ ಗಾಳಿಪಟ ನೋಡಿದ್ದರೆ.. ಗಣಿಯ ಪಾತ್ರ ಖಂಡಿತಾ ನಿಮ್ಮ ಮನಸ್ಸಿನಲ್ಲಿರುತ್ತೆ. ಬೋರ್ಡಿಂಗ್ ಸ್ಕೂಲಿನಲ್ಲಿ ಓದಿರೋ ಕನ್ನಡ ಬರೆಯಲು, ಓದಲು ಬಾರದ ಹುಡುಗ ಗಣಿ. ಮಹಾನ್ ತಿಂಡಿಪೋತ. ಕನ್ನಡವನ್ನು ಕಲಿತು ಪ್ರಿಯತಮೆಗಾಗಿ ಕವಿತೆ ಬರೆಯುವ ಪ್ರೇಮಿ... ಆ ಗಾಳಿಪಟದ ಗಣಿ.
ಈ ಗಾಳಿಪಟದಲ್ಲೂ ತುಂಬಾ ವ್ಯತ್ಯಾಸವೇನೂ ಇಲ್ಲ. ಹೆಸರು ಕೂಡಾ ಅದೇ, ಗಣಿ. ಗಾಳಿಪಟದಲ್ಲಿ ಮಂಡ್ಯ ಎಂಎಲ್‍ಎ ಮಗ ನಾನು. ಆ ಜೋಡಿ ರಂಗಾಯಣ ರಘು ಮತ್ತು ಪದ್ಮಜಾ ರಾವ್ ಇಲ್ಲಿಯೂ ಅದೇ ಪಾತ್ರದಲ್ಲಿದ್ದಾರೆ. ಅಲ್ಲಿನಂತೆಯೇ ಇಲ್ಲಿಯೂ ತಿಂಡಿಪೋತ ನಾನು. ಚಿತ್ರದ ಮೊದಲಾರ್ಧದಲ್ಲಿ ದುಂಡು ದುಂಡಗೆ ಇರುತ್ತೇನೆ. ನಂತರ ಸಣ್ಣಗಾಗುತ್ತೇನೆ. 8 ಕೆಜಿ ತೂಕ ಹೆಚ್ಚಿಸಿಕೊಂಡು.. ನಂತರ 5 ಕೆಜಿ ಇಳಿಸಿಕೊಂಡು ಫಿಟ್ ಆಗಿದ್ದೇನೆ... ಎಂದೆಲ್ಲ ವಿವರ ಕೊಟ್ಟಿದ್ದಾರೆ ಗಣಿ.
ಗಾಳಿಪಟದಲ್ಲಿ ಆ ಗಣಿಗೆ ಪ್ರೀತಿಯಾಗೋದು ವಿಧವೆಯಾಗಿರುವ ಡೈಸಿ ಬೋಪಣ್ಣ ಮೇಲೆ. ಇಲ್ಲಿ.. ವೈಭವಿ ಶಾಂಡಿಲ್ಯ ಜೋಡಿ. ಸಿಕ್ಕಾಪಟ್ಟೆ ಮಾಡ್ & ಬೋಲ್ಡ್ ಅನ್ನೋದು ಟ್ರೇಲರಿನಲ್ಲೇ ಗೊತ್ತಾಗಿದೆ. ಭಟ್ರು ಪ್ರತಿ ಪಾತ್ರವನ್ನೂ ಸ್ಪೆಷಲ್ ಆಗಿ ರೂಪಿಸಿದ್ದಾರೆ. ಅವರ ಪಾತ್ರ ಮತ್ತು ಕಲ್ಪನೆ ಯಾವಾಗಲೂ ಔಟ್ ಆಫ್ ದಿ ಬಾಕ್ಸ್ ಎಂದಿರೋ ಗಣಿಗೆ ಇಲ್ಲಿ ದೂದ್‍ಪೇಡ ದಿಗಂತ್ ಮತ್ತು ಪವನ್ ಇಬ್ಬರೂ ಫ್ರೆಂಡ್ಸ್. ಅಲ್ಲಿನಂತೆಯೇ ಇಲ್ಲಿಯೂ ಅನಂತನಾಗ್ ಇದ್ದಾರೆ. ಆ ಗಾಳಿಪಟದಲ್ಲಿ ಇಬ್ಬರು ನಾಯಕಿಯರ ಅಪ್ಪ ಮತ್ತೊಬ್ಬ ನಾಯಕಿಯ ಮಾವನಾಗಿದ್ದವರು ಇಲ್ಲಿ ಟೀಚರ್. ಆ ಟೀಚರ್ ಸುತ್ತಲೂ ಚೆಂದದ ಕಥೆಯಿದೆ. ಆದರೆ.. ಆ ಗಾಳಿಪಟದ ಅಂಗವೈಕಲ್ಯ ಮತ್ತು ಹಂದಿಬಾಲದ ಕಥೆಯಂತೂ ಅಲ್ಲ ಅನ್ನೋದು ಗಣಿ ಕೊಡೋ ಭರವಸೆ.
ದನಕಾಯೋದು ಸಿನಿಮಾ ಮಾಡುವಾಗ ಗಾಳಿಪಟ 2 ಚಿತ್ರದ ಕಾನ್ಸೆಪ್ಟ್ ಮೂಡಿತ್ತು. ಅದಕ್ಕೆ ಕಾರಣ ಗಣೇಶ್ ನಟಿಸಿದ್ದ ಮುಂಗಾರು ಮಳೆ 2. ಅದಾದ ಮೇಲೆ ಮುಗುಳುನಗೆ ಚಿತ್ರ ಮಾಡುವಾಗ ಕಥೆ ಒಂದು ಹದಕ್ಕೆ ಬಂತು. ಈಗ ಗಾಳಿಪಟ 2 ಸಿದ್ಧವಾಗಿದೆ. ಗಾಳಿಪಟ 3 ಮಾಡೋಕೂ ಕಥೆಯ ಎಳೆ ಸಿದ್ಧವಾಗಿದೆ ಎನ್ನುತ್ತಿದ್ದಾರೆ ಯೋಗರಾಜ್ ಭಟ್.
ಯೋಗರಾಜ್ ಭಟ್ ಮತ್ತು ಗಣೇಶ್ ಒಟ್ಟಿಗೇ ಮಾಡುತ್ತಿರೋ 4ನೇ ಸಿನಿಮಾ ಇದು. ಇದಕ್ಕೂ ಮುನ್ನ ಮುಂಗಾರು ಮಳೆ, ಗಾಳಿಪಟ ಮತ್ತು ಮುಗುಳುನಗೆ ಮೂರೂ ಚಿತ್ರಗಳು ಸೂಪರ್ ಹಿಟ್. ಈಗ ಗಾಳಿಪಟ 2. ರಮೇಶ್ ರೆಡ್ಡಿಯವರಂತೂ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಪಾಸಿಟಿವ್ ಮಾತುಗಳಿಂದ ಖುಷಿಯಾಗಿದ್ದಾರೆ.