ವಿಕ್ರಾಂತ್ ರೋಣ ಚಿತ್ರ ಹೊಸ ಕ್ರಾಂತಿಯನ್ನೇ ಮಾಡೋಕೆ ಹೊರಟಿದೆ. ಲಾಭಕ್ಕಿಂತ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದೇ ದೊಡ್ಡದು ಎಂದು ಹೊರಟಿರುವ ಚಿತ್ರತಂಡ ಈಗ ಚಿತ್ರಕ್ಕೆ ರೇಟ್ ಫಿಕ್ಸ್ ಮಾಡಿದೆ. ಅದೂ 3ಡಿ ಚಿತ್ರಕ್ಕೆ.
ಸೋಮವಾರದಿಂದ ವಿಕ್ರಾಂತ್ ರೋಣ ಚಿತ್ರವನ್ನು ನೀವು ಮಲ್ಟಿಪ್ಲೆಕ್ಸ್‍ಗಳಲ್ಲಿ ನೋಡಿದರೆ 150 ರೂ. ಸಿಂಗಲ್ ಸ್ಕ್ರೀನ್‍ನಲ್ಲಿ ನೋಡಿದರೆ 100 ರೂ. ಮಾತ್ರ. ವಿಕ್ರಾಂತ್ ರೋಣ ಚಿತ್ರದ 3ಡಿ ಕ್ವಾಲಿಟಿ ಬಗ್ಗೆ ಎಲ್ಲೆಡೆಯೂ ಪ್ರಶಂಸೆ, ಮೆಚ್ಚುಗೆಗಳಿವೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲೆಡೆ ಇಷ್ಟು ಅದ್ಭುತವಾಗಿ ಟೆಕ್ನಾಲಜಿಯನ್ನು ಬಳಸಿಕೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಚಿತ್ರವನ್ನು ಇನ್ನಷ್ಟು ಪ್ರೇಕ್ಷಕರಿಗೆ ತಲುಪಿಸುವ ಗುರಿ ಹಾಕಿಕೊಂಡು ಹೊರಟಿದ್ದಾರೆ ಜಾಕ್ ಮಂಜು.
ಅಷ್ಟೇ ಅಲ್ಲ, ಕೆಲವರು ಪೈರಸಿಯಲ್ಲಿ ಸಿನಿಮಾ ನೋಡುತ್ತಿದ್ದಾರಂತೆ. ಪೈರಸಿ ಯಾಕೆ, ಟಿಕೆಟ್ ದರ ನಾವೇ ಕಡಿಮೆ ಮಾಡಿದ್ದೇವೆ. ಬನ್ನಿ, ಥಿಯೇಟರಲ್ಲಿ ನೋಡಿ, ಖುಷಿ ಪಡಿ ಎಂದಿದ್ದಾರೆ ಜಾಕ್ ಮಂಜು.
ಅಂದಹಾಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ನಿಗದಿ ಮಾಡುವ ಬಗ್ಗೆ ಖಡಕ್ಕಾಗಿ ಮಾತನಾಡಿದ್ದರು. ಆದೇಶವನ್ನೂ ಪ್ರಕಟಿಸಿ, ಜಾರಿಗೆ ತರುವುದನ್ನು ಮಾತ್ರ ಮರೆತುಬಿಟ್ಟರು. ಈಗ ಸಿನಿಮಾದವರೇ ಆ ನಿರ್ಧಾರಕ್ಕೆ ಬಂದಿದ್ದಾರೆ.