ಪುನೀತ್ ರಾಜಕುಮಾರ್ ವಿಧಿವಶರಾದಾಗ ಅಭಿಮಾನಿಗಳ ನೋವು ಒಂದೆಡೆಯಾದರೆ, ಈ ಮನುಷ್ಯ ಅದೆಷ್ಟು ಜನರಿಗೆ ನೆರವು ನೀಡಿದ್ದಾರೆ ಎಂಬುದು ಬೆರಗು ಹುಟ್ಟಿಸಿತ್ತು. ನೆರವು ಪಡೆದವರೇ ಖುದ್ದಾಗಿ ಹೊರ ಬಂದು ಮೀಡಿಯಾಗಳಿಗೆ ಹೇಳುವವರೆಗೆ ಪುನೀತ್ ಅವರೊಳಗಿದ್ದ ದಾನಶೂರ ಕರ್ಣ ಜನರಿಗೆ ಗೊತ್ತೇ ಇರಲಿಲ್ಲ. ಬ್ಯಾಂಕ್ ಮೂಲಕವೇ ನೆರವು ನೀಡಿದರೂ, ಅದನ್ನ ಯಾರಿಗೂ ಹೇಳಬೇಡಿ ಎಂದು ಕೇಳಿಕೊಂಡು ತೆರೆಮರೆಯಲ್ಲೆ ಉಳಿಯುತ್ತಿದ್ದ ಅಪ್ಪು ಅವರ ಇನ್ನೊಂದು ದಾನದ ಕಥೆ ಇದು.
ಮೈಸೂರಿನಲ್ಲಿ ಮಂಡಿ ಮೊಹಲ್ಲಾದಲ್ಲಿರುವ ಮಿಷನ್ ಆಸ್ಪತ್ರೆಗೆ ಹಿರಿಯ ನಟ ಪ್ರಕಾಶ್ ರೈ ಅಪ್ಪು ಎಕ್ಸ್‍ಪ್ರೆಸ್ ಹೆಸರಿನಲ್ಲಿ ಆಂಬುಲೆನ್ಸ್ ಒಂದನ್ನು ನೀಡಿದ್ದಾರೆ. ಇದೊಂದು ಆಸ್ಪತ್ರೆಗಷ್ಟೇ ಅಲ್ಲ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒಂದೊಂದು ಆಸ್ಪತ್ರೆ ಗುರುತಿಸಿ ನೆರವು ನೀಡುವುದು ಪ್ರಕಾಶ್ ರೈ ಗುರಿ. ಅದಕ್ಕೆ ಅವರು ಇಟ್ಟುಕೊಂಡಿರೋ ಹೆಸರು ಅಪ್ಪು ಎಕ್ಸ್‍ಪ್ರೆಸ್. ಅದಕ್ಕೇನು ಕಾರಣ ಎಂಬುದಕ್ಕೆ ಅವರೇ ತಮ್ಮ ಅನುಭವ ಹೇಳಿದ್ದಾರೆ.
ಕೊರೊನಾ ಸಮಯದಲ್ಲಿ ಜನರ ಕಷ್ಟಕ್ಕೆ ಮಿಡಿದವರಲ್ಲಿ ಪ್ರಕಾಶ್ ರೈ ಕೂಡಾ ಒಬ್ಬರು. ತಮ್ಮ ಫೌಂಡೇಷನ್ ಮೂಲಕ ನೂರಾರು ಜನರಿಗೆ ಸಹಾಯ ಹಸ್ತ ಚಾಚಿದ್ದರು. ಅದನ್ನು ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡ ಪುನೀತ್, ಪ್ರಕಾಶ್ ರೈ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಷ್ಟೇ ಅಲ್ಲ, ವೈಯಕ್ತಿಕವಾಗಿ ರೈ ಅವರ ಫೌಂಡೇಷನ್`ಗೆ 2 ಲಕ್ಷ ರೂ. ನೀಡಿದ್ದರಂತೆ. ಮತ್ತು.. ಎಂದಿನಂತೆ
ನೆರವು ನೀಡಿದ್ದನ್ನು ಹೊರಗೆ ಹೇಳಬೇಡಿ ಎಂದು ಮನವಿ ಮಾಡಿದ್ದರಂತೆ.