ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಕಾರ್ಯನಿರತರಾಗಿದ್ದುಕೊಂಡು ಕನ್ನಡ ಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ಪ್ರವೀಣ್ ಶೆಟ್ಟಿಯವರ ಪುತ್ರ ಈಗ ಚಿತ್ರರಂಗ ಪ್ರವೇಶಿಸಿದ್ದಾರೆ. ಹೆಸರು ಸ್ವಲ್ಪ ವಿಭಿನ್ನ ಹಾಗೂ ವಿಶೇಷವಾಗಿದೆ. ಅಪ್ಪ ಪ್ರವೀಣ್ ಶೆಟ್ಟರಾದರೆ, ಮಗ ಪ್ರವೀರ್ ಶೆಟ್ಟಿ. ಚಿತ್ರದ ಹೆಸರು ಸೈರನ್.
ಕಾಮಿಡಿ ಹೀರೋ ಚಿಕ್ಕಣ್ಣ ಸೈರನ್ ಚಿತ್ರದ ಟೀಸರ್ ರಿಲೀಸ್ ಮಾಡಿ ಹೊಸ ಹೀರೋಗೆ ಶುಭ ಕೋರಿದ್ದಾರೆ. ಈ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುತ್ತಿದ್ದೇವೆ ಎಂದ ಪ್ರವೀರ್ ಶೆಟ್ಟಿ ಚಿತ್ರದ ಕಥೆ ವಿಶೇಷವಾಗಿದ್ದು, ಬಹಳ ಇಷ್ಟವಾಯಿತು ಎಂದರು. ಚಿತ್ರದ ನಿರ್ದೇಶಕ ರಾಜ ವೆಂಕಯ್ಯ. ಬಿಜು ಶಿವಾನಂದ್ ನಿರ್ಮಾಣದ ಚಿತ್ರವಿದು.
ನಿರ್ದೇಶಕ ರಾಜ ವೆಂಕಯ್ಯ ಅವರಿಗೆ ಚಿತ್ರರಂಗದಲ್ಲಿ ದಶಕಗಳ ಅನುಭವವಿದೆ. ಹಲವು ಚಿತ್ರಗಳಿಗೆ ಛಾಯಾಗ್ರಹಕನಾಗಿ, ಸಂಕಲನಕಾರನಾಗಿ ಕೆಲಸ ಮಾಡಿರುವ ಅವರಿಗೆ ಇದು ಮೊದಲ ಸಿನಿಮಾ.
ಪ್ರವೀರ್ ಶೆಟ್ಟಿ ಎದುರು ಲಾಸ್ಯ ನಾಯಕಿಯಾಗಿ ನಟಿಸಿದ್ದಾರೆ. ಹೊಸ ಹೀರೋಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ಲಹರಿ ವೇಲು, ಶಿವಾನಂದ ಶೆಟ್ಟಿ, ಪಳನಿ ಪ್ರಕಾಶ್, ಶರತ್ ಚಂದ್ರ ಮೊದಲಾದವರು ಶುಭ ಕೋರಿದ್ದಾರೆ.