ನಟ ಚಂದನ್ ಅವರನ್ನು ತೆಲುಗು ಚಿತ್ರರಂಗ, ಒಟಿಟಿ ಹಾಗೂ ಕಿರುತೆರೆಯಿಂದ ನಿಷೇಧಿಸುವಂತೆ ತೆಲುಗು ಟಿವಿ ಅಸೋಸಿಯೇಷನ್ ಶಿಫಾರಸು ಮಾಡಿದೆ. ನಮ್ಮ ಆತ್ಮಗೌರವ ಕಳೆದುಕೊಂಡು ಕೆಲಸ ಮಾಡೋಕೆ ಸಾಧ್ಯವಿಲ್ಲ. ಅಲ್ಲದೆ ಚಂದನ್ ಎರಡೂ ಭಾಷೆಗಳ ಕಲಾವಿದರು ಮತ್ತು ತಂತ್ರಜ್ಞರ ಮಧ್ಯೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎನ್ನುವುದು ತೆಲುಗು ಟಿವಿ ಅಸೋಸಿಷೇನ್ ಸದಸ್ಯರ ಆರೋಪ.
ಅಂದಹಾಗೆ ಹಲ್ಲೆಯಾಗಿರುವುದು ಶ್ರೀಮತಿ ಶ್ರೀನಿವಾಸ್ ಧಾರಾವಾಹಿ ಸೆಟ್‍ನಲ್ಲಿ. ಸಾವಿತ್ರಮ್ಮಗಾರು ಅಬ್ಬಾಯಿ ಸೆಟ್ಟಿನಲ್ಲಿ ಅಲ್ಲ. ಅಲ್ಲದೆ ಚಂದನ್, ಸಾವಿತ್ರಮ್ಮಗಾರು ಅಬ್ಬಾಯಿ ತಂಡದ ಜೊತೆಯಲ್ಲೂ ಇದೇ ರೀತಿ ಜಗಳ ಮಾಡಿಕೊಂಡಿದ್ದಾರಂತೆ. ಆ ದಿನ ಮಧ್ಯಾಹ್ನದ ನಂತರ ಲಂಚ್ ಬ್ರೇಕ್ ಮುಗಿಸಿದ ತಂಡದವರು ಲೈಟಿಂಗ್ ವ್ಯವಸ್ಥೆ ಆದ ಮೇಲೆ ಚಿತ್ರೀಕರಣಕ್ಕೆ ಕರೆದಿದ್ದಾರೆ. ಅಸೋಸಿಯೇಟ್ ಡೈರೆಕ್ಟರ್ ಕರೆದರೂ ಬಂದಿಲ್ಲ. ಅಸಿಸ್ಟೆಂಟ್ ಡೈರೆಕ್ಟರ್ ಕರೆದಾಗಲೂ ಬಂದಿಲ್ಲ. ಖುದ್ದು ನಿರ್ದೇಶಕರೇ ಹೋಗಿ ಕರೆದಾಗಲೂ ಬಂದಿಲ್ಲ. ಅಲ್ಲದೆ ಜೋರಾಗಿ ಕರೆದಾಗ ನಿದ್ರೆಯಲ್ಲಿದ್ದ ಚಂದನ್ ಏಕವಚನದಲ್ಲಿ ತಂಡದವರ ವಿರುದ್ಧ ಕಿರುಚಾಡಿದ್ದಾರೆ. ಚಂದನ್ ಅವರ ಇಂತಹ ವರ್ತನೆ ಇದು ಮೊದಲೇನೂ ಅಲ್ಲ. ಅಲ್ಲದೆ ಚಂದನ್ ತಮ್ಮ ದುರ್ವರ್ತನೆಯನ್ನು ಮುಚ್ಚಿಟ್ಟುಕೊಳ್ಳಲು ಕನ್ನಡ ಮತ್ತು ತೆಲುಗು ಕಲಾವಿದರು ಮತ್ತು ತಂತ್ರಜ್ಞರ ನಡುವೆ ಒಡಕು ಮೂಡಿಸಿ ವಿವಾದ ಸೃಷ್ಟಿಸಿದ್ದಾರೆ. ಹೀಗಾಗಿ ಅವರನ್ನು ನಿಷೇಧ ಮಾಡಿ ಎನ್ನುವುದು ಅಲ್ಲಿನವರ ಕೂಗು.
ಸದ್ಯಕ್ಕೆ ಚಂದನ್ ಇಲ್ಲದೆಯೇ ಧಾರಾವಾಹಿ ಚಿತ್ರೀಕರಣ ಶುರುವಾಗಿದೆ. ಇತ್ತ ಚಂದನ್ ನಾನೇ ತೆಲುಗಲ್ಲಿ ನಟಿಸಲ್ಲ ಎಂದಿದ್ದೇನೆ ಎಂದಿದ್ದಾರೆ.