ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಚಿತ್ರಗಳ ಖ್ಯಾತಿಯ ಶಶಾಂಕ್ ನಿರ್ದೇಶನದ ಹೊಸ ಸಿನಿಮಾ ಲವ್ 360 ಡಿಗ್ರಿ. ಈಗ ರೋಡ್ ಶೋ ಮೂಲಕ ಪ್ರಚಾರ ಹಮ್ಮಿಕೊಂಡಿದೆ. ಒಂದೆಡೆ ನಾಳೆ ಟ್ರೇಲರ್ ಬಿಡುಗಡೆ ಇಟ್ಟುಕೊಂಡಿರೋ ಚಿತ್ರತಂಡ ಇನ್ನೊಂದೆಡೆ ಚಿತ್ರವನ್ನು ಪುಟ್ಟ ಪುಟ್ಟ ನಗರಗಳಿಗೂ ತಲುಪಿಸಿ ಪ್ರಚಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯ ಮರಿಯಮ್ಮನಹಳ್ಳಿಯಲ್ಲಿ ನಡೆದ ಪ್ರಚಾರದಲ್ಲಿ ಗ್ರಾಮಸ್ಥರು ಹಾಗೂ ಹೊಸಪೇಟೆ ನಗರದ ಜನ ತೋರಿಸಿದ ಪ್ರೀತಿಗೆ ಶಶಾಂಕ್ ಮೂಕರಾಗಿ ಹೋಗಿದ್ದಾರೆ.
ಏಕೆಂದರೆ ಚಿತ್ರದ ಹೀರೋ ಪ್ರವೀಣ್ ಇದೇ ಮರಿಯಮ್ಮನಹಳ್ಳಿಯ ಹುಡುಗ. ಇವರ ಕುಟುಂಬ ಹೊಸಪೇಟೆಯಲ್ಲಿ ಆಸ್ಪತ್ರೆ ತೆರೆದು ಜನಸೇವೆ ಮಾಡುತ್ತಿದೆ. ವೈದ್ಯಕೀಯ ಸೇವೆಯನ್ನು ಎಲ್ಲರೂ ಬಿಸಿನೆಸ್ ರೀತಿ ನೋಡುವಾಗ ಇವರ ಕುಟುಂಬ ಅದನ್ನು ಪ್ರೀತಿಯಿಂದ ಸೇವೆಯಂತೆ ನೋಡುತ್ತಿರುವುದೇ ಇಷ್ಟೆಲ್ಲ ಜನರ ಪ್ರೀತಿಗೆ ಕಾರಣ.
ಹೊಸಪೇಟೆಯಿಂದ ಶುರುವಾದ ರೋಡ್ ಶೋ ಚಿತ್ರದುರ್ಗ, ತುಮಕೂರು, ನೆಲಮಂಗಲ ಮೂಲಕ ರೋಡ್ ಶೋ ಮುಗಿಸಿ ಬಂದಿದೆ.
ಲವ್ 360 ಚಿತ್ರಕ್ಕೆ ಪ್ರವೀಣ್ ಹೀರೋ. ರಚನಾ ಇಂದರ್ ನಾಯಕಿ. ಮುಗ್ಧ ಹೃದಯಗಳ ಪ್ರೀತಿಯ ಕಥೆ ಹೇಳೋಕೆ ಹೊರಟಿದ್ದಾರೆ ಶಶಾಂಕ್. ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಚಿತ್ರದ ಜಗವೇ ನೀನು ಹಾಡು ಈಗಾಗಲೇ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿರೋ ಚಿತ್ರ ಬೇರೆಯದೇ ಫೀಲ್ ಇರುವ ಅಪ್ಪಟ ಲವ್ ಸ್ಟೋರಿ. ಶಶಾಂಕ್ ಇದುವರೆಗೆ ಪ್ರೇಕ್ಷಕರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನ ಹುಸಿ ಮಾಡಿಲ್ಲ. ಹೀಗಾಗಿ ಕೆಆರ್‍ಜಿ ಸ್ಟುಡಿಯೋಸ್ ಮೂಲಕ ವಿತರಣೆಯಾಗುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯಂತೂ ಇದೆ.