ಗಾಳಿಪಟ 2 ಚಿತ್ರದ ಟ್ರೇಲರ್ ನೋಡಿದವರಿಗೆ ಕಾಣುತ್ತಿರುವ ಮತ್ತು ಕಾಡುತ್ತಿರುವ ಅಂಶ ಇದೇ. ಚಿತ್ರದಲ್ಲಿ ಮೂವರು ಗೆಳೆಯರ ಮಜವಾದ ಲವ್ ಸ್ಟೋರಿಯನ್ನ ನಿಜವಾದ ಪನ್&ಫನ್‍ಗಳ ಮೂಲಕ ಹೇಳಿದ್ದಾರಂತೆ ಭಟ್ಟರು. ಎಂದಿನಂತೆ.. ಭಟ್ಟರು ಈ ಬಾರಿಯೂ ಹೊಸದೊಂದು ಕನಸಿನ ಕೋಟೆ ಕಟ್ಟಿದ್ದಾರೆ. ಗಾಳಿಪಟದಲ್ಲಿ ಮುಗಿಲ್‍ಪೇಟೆ ಸೃಷ್ಟಿಸಿದ್ದ ಯೋಗರಾಜ್ ಭಟ್, ಇಲ್ಲಿ ನೀರಕೋಟೆ ಅನ್ನೋ ಇನ್ನೊಂದು ಜಗತ್ತು ಸೃಷ್ಟಿಸಿದ್ದಾರೆ. ಅಲ್ಲೊಂದು ಶಾಲೆ.. ಆ ಶಾಲೆಯ ತುಂಟ ಹುಡುಗರೇ ಈ ಗಣಿ, ದಿಗ್ಗಿ ಮತ್ತು ಭೂಷಿ. ಅವರ ಏಕಾಗ್ರತೆ ಕೆಡಿಸಲೆಂದು ಬರುವ ಅಪ್ಸರೆಯರೇ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ನಿಶ್ವಿಕಾ ನಾಯ್ಡು.. ಆದರೆ.. ಇಡೀ ಕಥೆ ಇದ್ದಕ್ಕಿದ್ದಂತೆ ಸೀರಿಯಸ್ ಆಗುತ್ತೆ.
ಅನುಮಾನವೇ ಇಲ್ಲದಂತೆ ಅಲ್ಲೊಂದಿಷ್ಟು ಕಣ್ಣೀರು ಹಾಕಿಸುವ ಕಥೆಯೂ ಇದೆ. ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಜೋಡಿ ಕಣ್ಣೀರು ಹರಿಸಲೆಂದೇ ಬರುತ್ತಿದ್ದಾರೇನೋ ಎಂಬಂತೆ ನಗಿಸಿದ್ದಾರೆ. ಅನಂತ್ ನಾಗ್ ಹುಚ್ಚನಾ..? ಅಲ್ಲೇ ಇರೋದು ಟ್ವಿಸ್ಟು.
ಸಿಂಪಲ್ಲಾಗ್ ಹೇಳ್ಬೇಕಂದ್ರೆ ಭಟ್ಟರು ಈ ಬಾರಿಯೂ ಎಂದಿನಂತೆ ಒಂದು ವಿಶಿಷ್ಟ ಕಥೆಯನ್ನ ವಿಶೇಷ ಶೈಲಿಯಲ್ಲಿ ಹೇಳೋಕೆ ಬಂದಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ಕು ಮ್ಯಾಜಿಕ್ ಮಾಡಿದರೆ, ಕಾಯ್ಕಿಣಿ ಸಾಹಿತ್ಯ ಕರಾಮತ್ತು ಮಾಡುತ್ತಿದೆ. ಚಿತ್ರದ ಟ್ರೇಲರ್`ನಲ್ಲೇ ಪುಟ್ಟದೊಂದು ಕಥೆ ಹೇಳಿರುವ ಭಟ್ಟರು ಮುಂದಿನ ವಾರ ಕಂಪ್ಲೀಟ್ ಸಿನಿಮಾ ತೋರಿಸಲಿದ್ದಾರೆ.