ಅಪ್ಪ ಕನ್ನಡ ಚಿತ್ರರಂಗದ ಅದ್ವಿತೀಯ ಕಲಾ ನಿರ್ದೇಶಕ. ಮಗ ಸೂರ್ಯ ಸಾಗರ್ ಇಂಡಿಯಾದಲ್ಲಿಯೇ ಅಪರೂಪವಾದ ಮವಾಯ್ಥಾಯ್ ಕಲಿತಿರೋ ಕ್ರೀಡಾಪಟು. ಈಗಾಗಲೇ ಹಲವು ಬಾರಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದಕ ಗೆದ್ದು ಭಾರತೀಯ ಕ್ರೀಡಾಪಟುಗಳ ಪುಸ್ತಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸೂರ್ಯ ಸಾಗರ್ ಇದೀಗ ಮತ್ತೊಮ್ಮೆ ಥೈಲ್ಯಾಂಡ್ನಲ್ಲಿ ಸಾಧನೆ ಬರೆದಿದ್ದಾರೆ.
ಥೈಲ್ಯಾಂಡ್ನ ರಾಜಮೆಡ್ನರ್ನ್ ಕ್ರೀಡಾಂಗಣ ಇದೆಯಲ್ಲ, ಅದು ಖ್ಯಾತವಾಗಿರೋದೇ ಮವಾಯ್ಥಾಯ್ ಕ್ರೀಡಾಂಗಣ ಎಂದು. ಕ್ರಿಕೆಟ್ನಲ್ಲಿ ಲಾಡ್ರ್ಸ್, ಈಡನ್ ಗಾರ್ಡನ್ ಕ್ರೀಡಾಂಗಣಗಳು ಹೇಗೋ.. ಹಾಗೆ ಮವಾಯ್ಥಾಯ್ನಲ್ಲಿ ಈ ಕ್ರೀಡಾಂಗಣ. ಇಲ್ಲಿ ಸೂರ್ಯ ಸಾಗರ್ ಆಡಿದ್ದಷ್ಟೇ ಅಲ್ಲ, ಪಂದ್ಯವನ್ನೂ ಗೆದ್ದಿದ್ದಾರೆ. ಇದುವರೆಗಿನ ಇತಿಹಾಸದಲ್ಲಿಯೇ ಇಲ್ಲಿ ಆಡಿ ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಬರೆದಿದ್ದಾರೆ.
ಸೂರ್ಯ ಸಾಗರ್`ಗೆ ಹಲವು ಸೆಲಬ್ರಿಟಿಗಳು ಕಂಗ್ರಾಟ್ಸ್ ಹೇಳಿ ಅಭಿನಂದಿಸಿದ್ದಾರೆ. ಇದಿನ್ನೂ ಆರಂಭ. ಕಲಿಯೋದು ಇನ್ನೂ ಸಾಕಷ್ಟಿದೆ. ಆಟದಲ್ಲಿ ಇನ್ನೂ ಮೇಲೆ ಹೋಗಬೇಕಿದೆ. ಕರಗತ ಮಾಡಿಕೊಳ್ಳಬೇಕಾದ ಪಟ್ಟುಗಳಿವೆ. ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ ಸೂರ್ಯ ಸಾಗರ್.