` ಸುದೀಪ್ ವಿರುದ್ಧ ವ್ಯವಸ್ಥಿತ ಸಂಚು : ಯಾರದು ಸೂತ್ರಧಾರಿ? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಸುದೀಪ್ ವಿರುದ್ಧ ವ್ಯವಸ್ಥಿತ ಸಂಚು : ಯಾರದು ಸೂತ್ರಧಾರಿ?
Kiccha Sudeep

ನನ್ನನ್ನು ಟೀಕಿಸುವವರೂ ಇದ್ದಾರೆ. ಆದರೆ ಮೆಚ್ಚಿಕೊಳ್ಳುವವರು.. ಪ್ರೀತಿಸುವವರ ಸಂಖ್ಯೆ ದೊಡ್ಡದು. ಹೀಗಾಗಿ ನಾನು ತೆಗಳುವವರ ಬಗ್ಗೆ.. ಅದರಲ್ಲೂ ವಿನಾಕಾರಣ ಸುಖಾಸುಮ್ಮನೆ ತೆಗಳುವವರ ಬಗ್ಗೆ ತಲೆಕೆಡಿಸಿಕೊಳ್ಳೋದೂ ಇಲ್ಲ. ಪ್ರೀತಿಸುವವರ ಸಂಖ್ಯೆಯೇ ದೊಡ್ಡದಿರುವಾಗ.. ಅವರ ಬಗ್ಗೆ ನಾನ್ಯಾಕೆ ಯೋಚಿಸಿ ಸಮಯ ಹಾಳುಮಾಡಿಕೊಳ್ಳಲಿ..

ಇದು ಸುದೀಪ್ ತಮ್ಮನ್ನು ಟೀಕಿಸುವ.. ಲೇವಡಿ ಮಾಡುವ.. ಮನಸ್ಸಿಗೆ ಬಂದಂತೆ ಬಯ್ಯುವವರ ಬಗ್ಗೆ ನೀಡಿದ್ದ ಹೇಳಿಕೆ. ಅದು ನಿಜವೂ ಕೂಡಾ.

ಸುದೀಪ್ ಅವರಿಗೆ ವಿವಾದಗಳು ಹೊಸದಲ್ಲ. ಅಪಪ್ರಚಾರವೂ ಹೊಸದಲ್ಲ. ಅವರ ತಪ್ಪೇ ಇಲ್ಲದಿದ್ದರೂ ಟೀಕೆಗೆ ಗುರಿಯಾಗಿದ್ದಿದೆ.

ಸುದೀಪ್ ಸಂಕಷ್ಟದಲ್ಲಿರುವ ಯಾರಿಗಾದರೂ ಆರ್ಥಿಕ ನೆರವು ನೀಡಿದರೆ.. ಕೊಟ್ಟಿದ್ದು ಇಷ್ಟೇನಾ.. ಇನ್ನೂ ಕೊಡಬೇಕಿತ್ತು ಎಂದೂ..

ಸುದೀಪ್ ತಮ್ಮ ಟ್ರಸ್ಟ್ ಮೂಲಕ ನೀಡಿದ ನೆರವು ಸುದ್ದಿಯಾದರೆ.. ಪ್ರಚಾರಕ್ಕಾಗಿ ಮಾಡ್ತಾರೆ ಎಂದೂ..

ಇನ್ಯಾರದೋ ಕಷ್ಟಕ್ಕೆ ಸ್ಪಂದಿಸಿದರೆ.. ಅವರಿಗ್ಯಾಕೆ ಸ್ಪಂದಿಸಲಿಲ್ಲ ಎಂದೂ..

ತಮ್ಮ ಆಪ್ತರು, ಗೆಳೆಯರಿಗೆ ಸಹಾಯ ಮಾಡಿದರೆ.. ಅವರಿಗೆ ಮಾತ್ರನಾ.. ಇವರಿಗ್ಯಾಕೆ ಮಾಡಲಿಲ್ಲ ಎಂದೂ..

ಅಡುಗೆಯ ಫೋಟೋ ಹಾಕಿದರೆ ಎಷ್ಟ್ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯ್ತಿದ್ದಾರೆ ಗೊತ್ತಾ ಎಂದೂ..

ಥರಹೇವಾರಿ ಟೀಕೆಗಳು. ಈಗಲೂ ಅಷ್ಟೆ.. ವಿಕ್ರಾಂತ್ ರೋಣ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲ ಶೋಗಳು ಹೌಸ್‍ಫುಲ್. ಕಲೆಕ್ಷನ್ ಮೊದಲ ದಿನವೇ 35 ಕೋಟಿ ದಾಟಿದೆ. 2ನೇ ದಿನದ ಶೋಗಳೂ ಭರ್ತಿ. ಸಿನಿಮಾ ನೋಡಿದವರಿಗೆಲ್ಲ ಚಿತ್ರದ ಪ್ರತಿಯೊಂದು ಅಂಶಗಳೂ ಇಷ್ಟವಾಗಿವೆ. ಹಾಡುಗಳು ವೈರಲ್ ಆಗಿವೆ. ಆದರೆ.. ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ಸ್ ಬರತೊಡಗಿವೆ. ಹೀಗೆ ಟೀಕೆ ಮಾಡುವವರು ಮೊದಲು ಸಿನಿಮಾ ನೋಡಿ. ನಂತರ ಕಮೆಂಟ್ ಮಾಡಿ ಎಂದು ಬರೆದುಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್. ಬರುತ್ತಿರುವ ಕಮೆಂಟ್ಸ್ ಶೈಲಿ ನೋಡಿದರೆ ಇದೊಂದು ವ್ಯವಸ್ಥಿತ ಷಡ್ಯಂತ್ರದಂತೆ ಕಾಣುತ್ತಿದ್ದರೆ ಅಚ್ಚರಿಯಿಲ್ಲ.

ಕನ್ನಡ ಸಿನಿಮಾಗಳು ಗೆಲ್ಲಬೇಕು. ಅದರಲ್ಲೂ ಚೆನ್ನಾಗಿರುವ ಸಿನಿಮಾಗಳು ಇನ್ನೂ ಇನ್ನೂ ಗೆಲ್ಲಬೇಕು. ಭರ್ಜರಿಯಾಗಿ ಗೆಲ್ಲುತ್ತಿರುವ ಸಿನಿಮಾವನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ದು ಗೆಲ್ಲಿಸಬೇಕು. ಚಿತ್ರರಂಗ ಗೆಲ್ಲುವುದು.. ಕನ್ನಡ ಗೆಲ್ಲುವುದು ಆವಾಗಲೇ.. ಇದು ಕೆಲವರಿಗೆ ಅದ್ಯಾಕೆ ಅರ್ಥವಾಗುತ್ತಿಲ್ಲವೋ..