ಇದು ಸ್ಯಾಂಡಲ್`ವುಡ್ ಸ್ಟೋರಿ ಅಲ್ಲ. ಪಕ್ಕದ ತೆಲುಗು ಚಿತ್ರರಂಗದ ಕಥೆ. ಇತ್ತೀಚೆಗೆ ತೆಲುಗಿನಲ್ಲಿ ದೊಡ್ಡ ಮಟ್ಟದ ಹಿಟ್ ಚಿತ್ರಗಳು ಬಂದಿವೆ. ಆರ್.ಆರ್.ಆರ್. ಮತ್ತು ಪುಷ್ಪ ದೊಡ್ಡ ಮಟ್ಟದ ಹಿಟ್ ಆಗಿವೆ. ಆದರೆ.. ಉಳಿದ ಲೆಕ್ಕ ನೋಡಿದರೆ ಸ್ಟಾರ್ ಚಿತ್ರಗಳು ಪಲ್ಟಿ ಹೊಡೆದಿದ್ದೇ ಹೆಚ್ಚು.
ಆರ್.ಆರ್.ಆರ್. ವಿಶ್ವಮಟ್ಟದಲ್ಲಿ ದೊಡ್ಡ ಸಕ್ಸಸ್ ಕಂಡರೂ ಕೆಲವು ನಿರ್ಧಿಷ್ಟ ಏರಿಯಾಗಳಲ್ಲಿ ವಿತರಕರಿಗೆ ಲಾಸ್ ಆಗಿದೆ.
ಪವನ್ ಕಲ್ಯಾಣ್ ಅವರ ಭೀಮ್ಲಾ ನಾಯಕ್, ಮಹೇಶ್ ಬಾಬುರ ಸರ್ಕಾರಿ ವಾರು ಪಾಟ, ಚಿರಂಜೀವಿಯವರ ಆಚಾರ್ಯ, ಪ್ರಭಾಸ್`ರ ರಾಧೇ ಶ್ಯಾಮ್ ಚಿತ್ರಗಳು ವಿತರಕರು ಹಾಗೂ ನಿರ್ಮಾಪಕರಿಗೆ ಖುಷಿ ಕೊಟ್ಟಿಲ್ಲ. ಆಚಾರ್ಯ, ರಾಧೇ ಶ್ಯಾಮ್ ಚಿತ್ರ ವಿತರಕರಂತೂ ಕಣ್ಣೀರಿಡುವಂತಾಗಿದೆ. ಭೀಮ್ಲಾ ನಾಯಕ್ ಮತ್ತು ಸರ್ಕಾರಿವಾರುಪಾಟ ಗೆದ್ದರೂ ನಿರ್ಮಾಪಕರಿಗೆ ದೊಡ್ಡ ಲಾಭವೇನೂ ಸಿಕ್ಕಿಲ್ಲ. ಅಲ್ಲಿಗಲ್ಲಿಗೆ ಸರಿ ಹೋಗಿದೆ. ಇದಕ್ಕೆಲ್ಲ ಏನು ಕಾರಣ ಎಂದು ಹುಡುಕಿದಾಗ..
ಸ್ಟಾರ್ ನಟರು ಪ್ರತಿ ಚಿತ್ರಕ್ಕೂ ತಮ್ಮ ಸಂಭಾವನೆ ಏರಿಸಿಕೊಳ್ಳುತ್ತಲೇ ಇದ್ದಾರೆ ಎನ್ನುವುದು ಮೊದಲ ಕಾರಣವಾಗಿ ಹೊರಬಿದ್ದಿದೆ. ಕೆಲವು ನಟರು ತಮ್ಮ ಚಿತ್ರಗಳು ಸೋತಿದ್ದರೂ ಸಂಭಾವನೆ ಏರಿಸಿಕೊಳ್ಳುತ್ತಲೇ ಇದ್ದಾರಂತೆ. ಇದರ ಜೊತೆಗೆ ಸ್ಟಾರ್ ನಟರೆಲ್ಲ ಸಿಂಗಲ್ ಡೋರ್ ಕ್ಯಾರವಾನ್ ಇದ್ದರೆ ಮಾತ್ರ ಬರುತ್ತೇವೆ ಎನ್ನುವುದು, ಪ್ರತಿಯೊಬ್ಬ ಕಲಾವಿದರನ್ನೂ ಅವರವರ ಮನೆಯಿಂದಲೇ ಪಿಕಪ್ ಮಾಡಬೇಕು ಎನ್ನುವುದು, ಮೂಡ್ ಇಲ್ಲ, ರಾತ್ರಿ ಪಾರ್ಟಿ ಲೇಟ್ ಆಯ್ತು.. ಎಂಬ ಕುಂಟುನೆಪ ಹೇಳಿ ಶೂಟಿಂಗ್ ಕ್ಯಾನ್ಸಲ್ ಮಾಡಿಸುವುದು.. ತಮಗೆ ಬೇಕಾದವರಿಗೇ ಚಾನ್ಸ್ ಕೊಡಬೇಕು ಎಂದು ದುಬಾರಿಯಾಗಿ ಖರ್ಚು ಮಾಡಿಸುವುದು.. ಇಂತಹವು ಹೆಚ್ಚಾಗಿವೆ. ಇದರಿಂದ ಲಾಸ್ ಆಗುತ್ತಿರುವುದು ನಿರ್ಮಾಪಕರಿಗೆ.
ಇದರ ಜೊತೆಗೆ ಟಿಕೆಟ್ ದರವನ್ನೂ ಏರಿಸುವಂತಿಲ್ಲ. ನಂತರ ರಿಲೀಸ್ ಆದ ಕೆಲವೇ ದಿನಗಳ ನಂತರ ಸಿನಿಮಾ ಒಟಿಟಿಯಲ್ಲಿ ಬರುತ್ತೆ. ಹೀಗಾದರೆ ಪ್ರೇಕ್ಷಕರು ಚಿತ್ರಮಂದಿರಗಳಿಂದ ದೂರ ಉಳಿಯುತ್ತಾರೆ. ಇಂತಹದ್ದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಡಿಮ್ಯಾಂಡ್ ಇಟ್ಟು ಆಗಸ್ಟ್ 1ರಿಂದ ಚಿತ್ರೀಕರಣವನ್ನೇ ಸ್ಥಗಿತಗೊಳಿಸುತ್ತಿದ್ದಾರೆ.