` ವಿಕ್ರಾಂತ್ ರೋಣ ಹೀರೋಗಳು ಇವರೇ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಕ್ರಾಂತ್ ರೋಣ ಹೀರೋಗಳು ಇವರೇ..
Vikrant Rona Image

ವಿಕ್ರಾಂತ್ ರೋಣ ರಿಲೀಸ್ ಆಗಿದ್ದಾಯ್ತು. ಪ್ರೇಕ್ಷಕರು ಕಣ್ತುಂಬಿಕೊಂಡಿದ್ದೂ ಆಯ್ತು. ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಮತ್ತು ಕಿಚ್ಚನ ಹೊಡೆದಾಟ ಸಖತ್ತಾಗಿದೆ. ಜಾಕ್ವೆಲಿನ್ ಗ್ಲಾಮರ್ರು.. ಟೆಂಪರೇಚರ್ ಹೆಚ್ಚಿಸುವಲ್ಲಿ ಗೆದ್ದಿದೆ. ಹೆಣ್ಣು ಮಕ್ಕಳಿದ್ದವರಿಗೆ ಸಿನಿಮಾ ಇಷ್ಟವಾಗುತ್ತೆ. ಸಿನಿಮಾ ನೋಡುವವರಿಗೆ ಫುಲ್ ಮೀಲ್ಸ್. ಪೈಸಾ ವಸೂಲ್. ಇದೆಲ್ಲದರ ಮಧ್ಯೆ ಚಿತ್ರದ ಹೀರೋಗಳು ಯಾರ್ ಯಾರು ಎಂದು ನೋಡಿದರೆ.. ಪಟ್ಟಿ ಸ್ವಲ್ಪ ದೊಡ್ಡದೇ ಇದೆ.

ಚಿತ್ರದ ಗ್ರಾಫಿಕ್ಸ್ ಅದ್ಭುತವಾಗಿದೆ. ನಿರ್ಮಲ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದವರು.

ಈ ಗ್ರಾಫಿಕ್ಸ್‍ಗೆ ಸರಿಯಾದ ಸೆಟ್ ಸಪೋರ್ಟ್ ಸಿಕ್ಕದೇ ಹೋದರೆ ತಾಳಮೇಳವೇ ತಪ್ಪಿಹೋಗುತ್ತಿತ್ತು. ಚಿತ್ರದ ಬಹುತೇಕ ಚಿತ್ರೀಕರಣವಾಗಿರೋದು ಸೆಟ್‍ನಲ್ಲಿ. ಆ ಸೆಟ್‍ನ ಸೃಷ್ಟಿಕರ್ತ ಶಿವಕುಮಾರ್.

ಸೆಟ್‍ನಲ್ಲಿಯೇ ಬಹುತೇಕ ಸಿನಿಮಾ ಚಿತ್ರೀಕರಣವಾದರೂ ಒಂದೊಂದು ದೃಶ್ಯವೂ ಅದ್ಭುತ ಎನ್ನುವಂತೆ ಸೆರೆ ಹಿಡಿದು ದೃಶ್ಯಕಾವ್ಯ ಸೃಷ್ಟಿಸಿರೋದು ವಿಲಿಯಂ ಡೇವಿಡ್.

ಆಶಿಕ್ ಕುಸುಗಳ್ಳಿ ಇಡೀ ಚಿತ್ರದ ಎಡಿಟಿಂಗ್ ಮತ್ತು ಕಲರಿಂಗ್ ನೋಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಅಂಶವನ್ನೂ ಗುರುತಿಸಿದ್ದಾರೆ.

ಇವೆಲ್ಲವೂ ಸರಿಯಾಗಿದ್ದಾಗ ಬಿಜಿಎಂ ಕೆಟ್ಟರೆ ಸಕಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ. ಆದರೆ.. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದೊಂದಿಗೇ ಕ್ಯಾರಿ ಆಗುವ ಮ್ಯೂಸಿಕ್ ಪ್ರೇಕ್ಷಕರನ್ನು ನೆತ್ತರ ಪರ್ಬದ ಲೋಕಕ್ಕೆ ನೇರವಾಗಿ ಕೊಂಡೊಯ್ದು ಕೂರಿಸಿ ಬಿಡುತ್ತದೆ.

ಇವೆಲ್ಲದಕ್ಕೂ ಒಂದು ಕೊಂಡಿಯಾಗಿ ಕುಳಿತು.. ಕನಸು ಕಂಡು.. ಆ ಕನಸು ನನಸಾಗುವ ತಂಡವನ್ನು ರೂಪಿಸಿರುವುದು ಅನೂಪ್ ಭಂಡಾರಿ.

ಅನೂಪ್ ಭಂಡಾರಿಯ ಎಲ್ಲ ಕನಸುಗಳಿಗೆ ತನುಮನ ಹಾಗೂ ವಿಶೇಷವಾಗಿ ಧನ ನೀಡಿರುವ ಜಾಕ್ ಮಂಜು ಚಿತ್ರದ ರಿಯಲ್ ಹೀರೋ.

ಈ ಎಲ್ಲ ಹೀರೋಗಳೂ ಒಟ್ಟಾಗಿ ಕೆಲಸ ಮಾಡಿದ ಪ್ರತಿಫಲ ವಿಕ್ರಾಂತ್ ರೋಣ. ಒಂದು ಸಿನಿಮಾವನ್ನು ಯಾರೋ ಒಬ್ಬರು ಗೆಲ್ಲಿಸೋಕೆ ಆಗಲ್ಲ.. ಅದೊಂದು ಟೀಂ ವರ್ಕ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ವಿಕ್ರಾಂತ್ ರೋಣ ಟೀಂ.