` ಫಿಲ್ಮ್ ಚೇಂಬರ್ ಹೊಸ ಕಮಿಟಿಗೆ ಹೈಕೋರ್ಟ್ ಬ್ರೇಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಫಿಲ್ಮ್ ಚೇಂಬರ್ ಹೊಸ ಕಮಿಟಿಗೆ ಹೈಕೋರ್ಟ್ ಬ್ರೇಕ್
KFCC

ಮೇ ತಿಂಗಳಲ್ಲಿ ನಡೆದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಅಕ್ರಮಗಳ ಆರೋಪ ಕೇಳಿ ಬಂದಿತ್ತು. ಅಧ್ಯಕ್ಷರಾಗಿ ಬಾಮಾ ಹರೀಶ್ ಗೆದ್ದಿದ್ದರು. ಆದರೆ ಚುನಾವಣೆಯಲ್ಲಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೇ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಾ.ರಾ.ಗೋವಿಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ಫಿಲ್ಮ್ ಚೇಂಬರ್ ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳಬಾರದು ಎಂದು ಸೂಚನೆ ನೀಡಿದೆ. ಚೇಂಬರ್ ಯಾವುದೇ ಪಾಲಿಸಿ ಹಾಗೂ ಹಣಕಾಸಿನ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳದಂತೆ ಆದೇಶ ಕೊಟ್ಟಿದೆ. ಅಕ್ರಮದ ಆರೋಪಗಳಿಗೆ ಸರಿಯಾದ ಉತ್ತರ ನೀಡುವಲ್ಲಿ ಆಯೋಗ ಮತ್ತು ಚೇಂಬರ್ ವಿಫಲವಾದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಆಗಸ್ಟ್ 2ರಂದು ವಿಚಾರಣೆ ನಡೆಯಲಿದ್ದು, ಅಂದು ಚುನಾವಣೆ ನಡೆದ ದಿನದ ಎಲ್ಲ ದಾಖಲಾತಿಗಳನ್ನೂ ನೀಡುವಂತೆ ಸೂಚನೆ ನೀಡಿದೆ.

ನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿ ಜೈಜಗದೀಶ್, ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪಾ ಶ್ರೀನಿವಾಸ್, ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಂದರ್ ರಾಜ್, ಖಜಾಂಚಿಯಾಗಿ ಟಿ.ಪಿ.ಸಿದ್ದರಾಜು ಗೆದ್ದಿದ್ದರು. ವಿತರಕರ ವಲಯದಿಂದ ಎನ್.ಎಂ.ಕುಮಾರ್, ಪ್ರದರ್ಶಕರ ವಲಯದಿಂದ ಕುಶಾಲ್ ಗೌರವ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರು.

ಆದರೆ ಈ ಚುನಾವಣೆಯಲ್ಲಿ ಗೆದ್ದವರನ್ನು ವಿಜೇತರು ಎಂದು ಘೋಷಿಸಲಾಗಿದೆಯಾದರೂ ಸೋತವರಿಗೆ ಇದುವರೆಗೆ ಸರಿಯಾದ ಮಾಹಿತಿ ನೀಡಿಲ್ಲ. ಮತಗಟ್ಟೆಗಳಲ್ಲಿ ಚುನಾವಣೆಗೆ ಸಂಬಂಧ ಇಲ್ಲದೇ ಇದ್ದವರು ನಿಯಮ ಮೀರಿ ಓಡಾಡಿದ್ದಾರೆ. ಮತದಾರರು ಅಲ್ಲದೇ ಇರುವವರೂ ಕೂಡಾ ಮತಗಟ್ಟೆಯೊಳಗೆ ಕಾಣಿಸಿಕೊಂಡಿದ್ದಾರೆ. ಕೆಲವು ಸದಸ್ಯರಿಗೆ ದಾಖಲೆಗಳಿದ್ದರೂ, ಪಟ್ಟಿಯಲ್ಲಿ ಹೆಸರಿದ್ದರೂ ಮತದಾನಕ್ಕೆ ಅವಕಾಶವನ್ನೇ ನೀಡಿಲ್ಲ. ಸಿಸಿಟಿವಿ ದೃಶ್ಯಗಳು, ದಾಖಲೆ ಪತ್ರಗಳು ಸೇರಿದಂತೆ ಹಲವು ಗೋಲ್‍ಮಾಲ್ ನಡೆದಿವೆ ಎಂಬ ಆರೋಪ ಕೇಳಿ ಬಂದಿದೆ. ಇದೆಲ್ಲದರಿಂದ ಚುನಾವಣೆ ನಡೆಸಿದ್ದ ಅಧಿಕಾರಿಗಳ ಮೇಲೆಯೇ ಅನುಮಾನ ಸಂದೇಹ ಮೂಡಿದೆ. ಇದು ಆಯೋಗದ ವಿಶ್ವಾಸಾರ್ಹತೆಗೇ ಧಕ್ಕೆಯಾಗಬಹುದು.. ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಸಾ.ರಾ.ಗೋವಿಂದು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡು ಮಧ್ಯಂತರ ಸೂಚನೆ ಕೊಟ್ಟಿದೆ.