ವಿಕ್ರಾಂತ್ ರೋಣ ಚಿತ್ರ ದೇಶದೆಲ್ಲೆಡೆ ಈವೆಂಟ್ ಮಾಡಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸೋ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಲುಲು ಮಾಲ್‍ನಲ್ಲಿ ವಿಕ್ರಾಂತ್ ರೋಣನ ಈವೆಂಟ್ ನಡೆದಿದ್ದು ವಿಶೇಷ. ಲುಲು ಮಾಲ್‍ನಲ್ಲಿ ನಡೆದ ಮೊದಲ ಈವೆಂಟ್ ಇದು ಎನ್ನುವುದು ಮತ್ತೊಂದು ವಿಶೇಷ.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಡೈರೆಕ್ಟರ್ ಆಗಬೇಕು ಎಂದು ಬಂದವರನ್ನು ಹೀರೋ ಆಗಿ ಎಂದು ಹೇಳಿದ್ದು ನಾನೇ ಎಂದು ಖುಷಿ ಪಟ್ಟು ಹೇಳಿಕೊಂಡರು ಉಪ್ಪಿ. ಯಶ್ ಇಂಡಸ್ಟ್ರಿಯನ್ನು ಪ್ಯಾನ್ ಇಂಡಿಯಾ ಲೆವೆಲ್ಲಿಗೆ ತೆಗೆದುಕೊಂಡು ಹೋದರು. ಈ ಚಿತ್ರ ವಿಶ್ವಮಟ್ಟಕ್ಕೆ ಒಯ್ಯಲಿ ಎಂದು ಹಾರೈಸಿದರು.
ಸಚಿವ ಮುನಿರತ್ನ, ಶಾಸಕ ಉದಯ್ ಗರುಡಾಚಾರ್ ಕೂಡಾ ವೇದಿಕೆಯಲ್ಲಿದ್ದು. ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅನುಶ್ರೀ.
ವೇದಿಕೆಯಲ್ಲಿ ಅಭಿಮಾನಿಯೊಬ್ಬರು ಸುದೀಪ್ ಅವರಿಗಾಗಿ ಸ್ಪೆಷಲ್ ಜಾಕೆಟ್ ವೊಂದನ್ನು ತಂದಿದ್ದರು. ಪ್ರಕಾಶ್ ಥಿಯೇಟರ್ ಮಾಲೀಕರು ತಂದಿದ್ದ ಹ್ಯಾಂಡ್ ಮೇಡ್ ಜಾಕೆಟ್‍ನ್ನು ವೇದಿಕೆ ಮೇಲೆಯೇ ಧರಿಸಿ ಖುಷಿಪಟ್ಟರು ಸುದೀಪ್.
ಪುಟ್ಟ ಮಕ್ಕಳು ಕಿಚ್ಚನ ಜೊತೆ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದರು.
ಗರಗರ ಗಗ್ಗರ ಡೈಲಾಗ್ ಹೊಡೆದು ವೇದಿಕೆಯಲ್ಲಿ ಮಿಂಚು ಹರಿಸಿದ ಸುದೀಪ್ ನಿರ್ದೇಶಕ ಅನೂಪ್ ಭಂಡಾರಿಯವರನ್ನು ಹೊಗಳಿದರು. ನಿರ್ದೇಶಕರ ಕಲ್ಪನೆಗೆ ತಕ್ಕಂತೆಯೇ ಸಿನಿಮಾ ಬಂದಿದೆ ಎಂದರು.
ಮಗಳಿಗಾಗಿ ವೇದಿಕೆಯಲ್ಲಿಯೇ ಚಿತ್ರದ ಹಾಡು ಹಾಡಿದ ಸುದೀಪ್ ಪ್ರತಿಯೊಬ್ಬ ಮಗಳೂ ತಮ್ಮ ತಮ್ಮ ತಂದೆಯಂದಿರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುತ್ತಾರೆ ಎಂದಿದ್ದು ವೇದಿಕೆಯಲ್ಲಿದ್ದವರನ್ನು ಭಾವುಕರನ್ನಾಗಿಸಿತು.