ನಿನಗೆ ನಿನ್ನ ತಪ್ಪುಗಳನ್ನೆಲ್ಲ ತಿದ್ದಿಕೊಳ್ಳೋಕೆ ಸೆಕೆಂಡ್ ಚಾನ್ಸ್ ಕೊಡ್ತೀನಿ..
ಲಕ್ಕಿಮ್ಯಾನ್ ಟೀಸರ್‍ನಲ್ಲಿ ಬರೋ ಡೈಲಾಗ್ ಅದು. ಆ ಸಂಭಾಷಣೆ ಹೇಳೋದು ಅಪ್ಪು. ಆ ಡೈಲಾಗ್ ಕೇಳಿದವರಿಗೆಲ್ಲ ಥಟ್ಟನೆ ನೆನಪಾಗೋದು.. ಅಪ್ಪುಗೆ ದೇವರು ಒಂದು ಚಾನ್ಸ್ ಕೊಡಬೇಕಿತ್ತು ಅನ್ನೋದು. ಲಕ್ಕಿಮ್ಯಾನ್ ಚಿತ್ರದ ಟೀಸರ್ ಹೊರಬಿದ್ದಾಗಿದೆ. ಚಿತ್ರದಲ್ಲಿ ಪುನೀತ್`ದು ದೇವರ ಪಾತ್ರ. ಅಭಿಮಾನಿಗಳ ಕಣ್ಣಲ್ಲಿ ದೇವರೇ ಆಗಿರುವ ಅಪ್ಪು.. ನಟಿಸಿರುವ ಕೊನೆಯ ಚಿತ್ರವಿದು. ಹೀರೋ ಆಗಿ ನಟಿಸಿದ್ದ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಆಗಿ ಬಾಕ್ಸಾಫೀಸ್‍ನಲ್ಲೂ ಗೆದ್ದಾಯ್ತು. ಈಗ ಲಕ್ಕಿಮ್ಯಾನ್ ಸರದಿ.
ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಚಿತ್ರವಿದು. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಹನಿ ಪ್ರಕಾಶ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಪ್ರಭುದೇವ ಜೊತೆ ಸ್ಟೆಪ್ಸ್ ಕೂಡಾ ಹಾಕಿದ್ದಾರೆ. ಇದು ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್. ಪಿ.ಆರ್. ಮೀನಾಕ್ಷಿ ಸುಂದರಂ ಮತ್ತು ಆರ್. ಸುಂದರ ಮೀನಾಕ್ಷಿ ನಿರ್ಮಿಸಿರುವ ಚಿತ್ರ ಆಗಸ್ಟ್‍ನಲ್ಲಿ ರಿಲೀಸ್ ಆಗೋಕೆ ಸಿದ್ಧವಾಗಿದೆ.