ಎಲ್ಲವೂ ಕಾಡು.. ಕಾಡಿನ ಮಧ್ಯೆ ಒಂದು ಜಲಪಾತ.. ಗುಹೆಗಳು.. ಎಲ್ಲವೂ ಕಾಡಿನಂತೆಯೇ ಕಾಣುತ್ತಿದೆ. ಆದರೆ.. ಅದು ಕಾಡಲ್ಲ. ಕಾಡಿನ ತರಾ.. ಏಕೆಂದರೆ ಈ ಕಾಡು ಸೃಷ್ಟಿಸಿದ್ದು ಶಿವಕುಮಾರ್. ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಚಲನ ಸೃಷ್ಟಿಸಿದ್ದ ಶಿವಕುಮಾರ್ ವಿಕ್ರಾಂತ್ ರೋಣನಿಗಾಗಿ ಸೃಷ್ಟಿಸಿರುವ ಜಗತ್ತು ಇನ್ನೂ ಒಂದು ಕೈಮೇಲೆ ಎನ್ನುವಂತಿದೆ.
ಈ ಚಿತ್ರಕ್ಕಾಗಿ ಕಾಡಿನ ಸೆಟ್ಟಿಗಾಗಿ 22 ಟ್ರಕ್‍ಗಳಲ್ಲಿ ಗಿಡ ತರಿಸಿಕೊಂಡಿದ್ದೇವೆ ಎನ್ನುತ್ತಾರೆ ಶಿವಕುಮಾರ್. 22 ಟ್ರಕ್ ಸಸಿಗಳು ಎನ್ನುವಾಗಲೇ ಚಿತ್ರದ ದೊಡ್ಡ ಕ್ಯಾನ್‍ವಾಸ್ ಅರ್ಥವಾಗಿ ಬಿಡುತ್ತದೆ. ಗಿಡಗಳನ್ನು ನೋಡಿಕೊಳ್ಳಲೆಂದೇ ಕೆಲವರನ್ನು ಕೆಲಸಕ್ಕಿಟ್ಟಿದ್ದರಂತೆ. ಪ್ರತಿ 20 ದಿನಗಳಿಗೊಮ್ಮೆ ಸೆಟ್`ನ ವಾತಾವರಣ ಬದಲಾಗದಂತೆ ಅಷ್ಟೂ ಗಿಡಗಳನ್ನು ಬದಲಿಸಬೇಕಿತ್ತು. ಮೊದಲು ಚೀನಾದಿಂದ ಕೃತಕ ಗಿಡಗಳನ್ನು ತರಿಸುವ ಪ್ಲಾನ್ ಇತ್ತು. ಕೊರೊನಾ ಎಲ್ಲವನ್ನೂ ಬದಲಿಸಿತು. ಇಲ್ಲಿಯೇ ಫಾರ್ಮ್‍ಗಳಿಂದ ತರಿಸಿಕೊಳ್ಳಲಾಯಿತು. ಕಾಡಿನ ಮಾದರಿಯ ನೆಲವನ್ನು ಸೃಷ್ಟಿಸೋಕೆ ವಿವಿಧ ಲೇಯರ್‍ಗಳನ್ನು ಸೃಷ್ಟಿಸಿ ಸಹಜವೆಂಬಂತೆ ಮಾಡಲಾಯಿತು ಎಂದೆಲ್ಲ ವಿವರ ನೀಡಿದ್ದಾರೆ ಶಿವಕುಮಾರ್.
ಇದುವರೆಗೆ ರಿಲೀಸ್ ಆಗಿರುವ ಟೀಸರ್, ಟ್ರೇಲರುಗಳಲ್ಲಿಯೇ ಶಿವಕುಮಾರ್ ಸೃಷ್ಟಿಸಿರುವ ಹೊಸ ಜಗತ್ತು ಬೆರಗು ಹುಟ್ಟಿಸಿದೆ. ನಿರ್ದೇಶಕ ಅನೂಪ್ ಭಂಡಾರಿಯವರ ಕನಸಿನ ಲೋಕವನ್ನು ಯಥಾವತ್ತು ಕಟ್ಟಿಕೊಟ್ಟಿದ್ದೇನೆ ಎನ್ನುವ ವಿಶ್ವಾಸ ಶಿವಕುಮಾರ್ ಮಾತಿನಲ್ಲಿದೆ. ಚಿತ್ರಕ್ಕಾಗಿ ಇದೇ ಮಾದರಿಯ ಒಟ್ಟು 14 ಸೆಟ್‍ಗಳನ್ನು ಸೃಷ್ಟಿಸಲಾಗಿತ್ತಂತೆ..