ಭಾರತೀಯ ಚಿತ್ರಜಗತ್ತು ಕುತೂಹಲದಿಂದ ಎದುರು ನೋಡುತ್ತಿರುವ ಸಿನಿಮಾ ವಿಕ್ರಾಂತ್ ರೋಣ. ವಿಕ್ರಾಂತ್ ರೋಣ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಸಿನಿಮಾ 3ಡಿಯಲ್ಲಿ ಬರುತ್ತಿದೆ ಅನ್ನೋದಷ್ಟೇ ಅಲ್ಲ, ಹಲವು ವಿಶೇಷಗಳನ್ನೇ ಹೊದ್ದುಕೊಂಡು ಬರುತ್ತಿರೋ ಸಿನಿಮಾ ಇದು. ಇಂಗ್ಲಿಷ್‍ನಲ್ಲೂ ಡಬ್ ಆಗಿ ರಿಲೀಸ್ ಆಗುತ್ತಿರುವ ಮೊಟ್ಟ ಮೊದಲ ಕನ್ನಡ ಸಿನಿಮಾ. ಸಿನಿ ಡಬ್ ಆಪ್ ಮೂಲಕ ಯಾವ ಭಾಷೆಯ ಸಿನಿಮಾ ನೋಡುತ್ತಿದ್ದರೂ, ನಿಮಗೆ ಬೇಕಾದ ಭಾಷೆಯಲ್ಲಿ ನೋಡುವುದಕ್ಕೆ ಅನೂಕಲ ಕಲ್ಪಿಸಿಕೊಟ್ಟಿರುವ ಜಗತ್ತಿನ ಮೊಟ್ಟ ಮೊದಲ ಸಿನಿಮಾ. ಕಿಚ್ಚ ವರ್ಸ್ ಹವಾ ಒಂದೆಡೆಯಾದರೆ, ರಕ್ಕಮ್ಮಾ ಹಾಡಿನ ಕ್ರೇಜ್ ಇನ್ನೊಂದೆಡೆ.
ಇದೇ ವೇಳೆ ಥಿಯೇಟರ್ ರಿಲೀಸ್‍ನಲ್ಲೂ ಚಿತ್ರ ಹೊಸ ದಾಖಲೆಯನ್ನೇ ಬರೆದಿದೆ. ಜುಲೈ 28ಕ್ಕೆ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಹೊರತುಪಡಿಸಿ 400ಕ್ಕೂ ಹೆಚ್ಚು ಸ್ಕ್ರೀನ್‍ನಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ವಿಕ್ರಾಂತ್ ರೋಣ. ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಗ್ರ್ಯಾಂಡ್ ಗ್ರ್ಯಾಂಡ್ ಗ್ರ್ಯಾಂಡ್ ಓಪನಿಂಗ್.
ಅನೂಪ್ ಭಂಡಾರಿ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹೂಡಿರುವುದು ಕಿಚ್ಚನ ಗೆಳೆಯ ಜಾಕ್ ಮಂಜು. ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಬೃಹತ್ ತಾರಾಗಣ ಇರೋ ಚಿತ್ರವಿದು. ಚಿತ್ರದ ಬಗ್ಗೆ.. ಚಿತ್ರದ ಕಥೆಯ ಬಗ್ಗೆ ನಿರೀಕ್ಷೆಗಳು ನೂರಾರಿವೆ. ಅಭಿಮಾನಿಗಳ ಹಾರೈಕೆ ಬೇರೆಯೇ ಇದೆ. ಜುಲೈ 28ಕ್ಕೆ ಕಿಚ್ಚನ ಹಬ್ಬ ಫಿಕ್ಸ್ ಆಗಿದೆ.