ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನಿರೀಕ್ಷೆಗಳೇನೂ ಕಡಿಮೆಯಿಲ್ಲ ಬಿಡಿ. ಇಡೀ ವಿಶ್ವದಲ್ಲಿ ಏಕಕಾಲಕ್ಕೆ ಸಾವಿರಾರು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರೋ ವಿಕ್ರಾಂತ್ ರೋಣ ಸಿನಿಮಾದ ಕಥೆ ಏನು? ಅನೂಪ್ ಭಂಡಾರಿ ಕುತೂಹಲ ಹೆಚ್ಚಿಸುತ್ತಿದ್ದಾರೆಯೇ ಹೊರತು ಕಥೆ ಹೇಳ್ತಿಲ್ಲ. ಪತ್ರಕರ್ತರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋ ಸುದೀಪ್, ಕಥೆಯ ಬಗ್ಗೆ ಕೇಳಿದಾಗ ನಕ್ಕು ನಗಿಸಿ ಸೈಲೆಂಟ್ ಮಾಡಿಸುತ್ತಿದ್ದಾರೆ. ಸುದೀಪ್ ಚಿತ್ರದ ಬಗ್ಗೆ ಹೇಳಿರೋ ಒಂದೇ ಒಂದು ವಿಷಯ ಇಷ್ಟೆ, ಅವರು ಚಿತ್ರದಲ್ಲಿ ದ್ವಿಪಾತ್ರ ಮಾಡಿಲ್ಲ. ಆದರೆ.. ಹೀರೋಯಿನ್ ನೀತಾ ಅಶೋಕ್ ಮಾತ್ರ ಚಿತ್ರದ ಒಂದು ಗುಟ್ಟನ್ನು ಹೇಳಿಬಿಟ್ಟಿದ್ದಾರೆ.
ನೀತಾ ಅಶೋಕ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಅಕಾ ಪನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯನ್ನು ಹೇಳೋ ಸೂತ್ರಧಾರಿಣಿಯೇ ಅಪರ್ಣಾ. ಕನ್ನಡತಿ. ಆದರೆ ಮುಂಬೈನಲ್ಲಿ ಹುಟ್ಟಿ ಬೆಳೆದಿರೋ ಹುಡುಗಿ. ಕನ್ನಡ ಮತ್ತು ಹಿಂದಿಯಲ್ಲಿ ಪಟಪಟನೆ ಮಾತನಾಡುವ.. ಹೊಸ ಹೊಸ ಸ್ಥಳಗಳನ್ನು ಹುಡುಕುವ ಅಡ್ವೆಂಚರಸ್ ಹುಡುಗಿಯ ಪಾತ್ರ ಎಂದೆಲ್ಲ ಹೇಳಿರೋ ನೀತಾ ಅಶೋಕ್ ಚಿತ್ರವನ್ನು ಹೋಲ್ ಸೇಲ್ ಪ್ಯಾಕೇಜ್ ಎಂದಿದ್ದಾರೆ. ಮಿಸ್ಟರಿ, ಥ್ರಿಲ್, ಎಮೋಷನ್ಸ್, ಆ್ಯಕ್ಷನ್.. ಎಲ್ಲವೂ ಇರೋ ಕಂಪ್ಲೀಟ್ ಪ್ಯಾಕೇಜ್ ಎಂದಿದ್ದಾರೆ.
ನಿರ್ದೇಶಕ, ನಾಯಕರು ತುಟಿಗೇ ಟೇಪ್ ಹಾಕಿಕೊಂಡಿರೋವಾಗ ರಿಲೀಸ್ ಹೊತ್ತಲ್ಲಿ ನಾಯಕಿ ಇಷ್ಟು ಹೇಳಿದರು ಎಂದು ಫ್ಯಾನ್ಸ್ ಖುಷಿಯಾಗಬೇಕಷ್ಟೆ. ಯಾಕಂದ್ರೆ ನೀತಾ ಅಶೋಕ್ ಕೂಡಾ ಪೂರ್ತಿ ಹೇಳಿಲ್ಲ. ಇದ್ದ ಥ್ರಿಲ್ಲಿಂಗ್ ಸಸ್ಪೆನ್ಸ್‍ನ್ನ ಡಬಲ್ ಮಾಡಿ ಹೋಗಿದ್ದಾರೆ. ನೀತಾ ಮಾತು ಕೇಳಿ ಆಕ್ಚುಯಲಿ ಥ್ರಿಲ್ ಆಗಿ ನಗು ಚೆಲ್ಲಿರೋದು ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು. ಚಿತ್ರದ ಕ್ರೇಜ್ ಹೆಚ್ಚಿದಷ್ಟೂ ಥ್ರಿಲ್ ಆಗಬೇಕಾದವರು ಅವರೇ ತಾನೆ..